ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಯೋಜನೆ ಮುಂದುವರಿಸುವಂತೆ ಮನವಿ
ಮೈಸೂರು

ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಯೋಜನೆ ಮುಂದುವರಿಸುವಂತೆ ಮನವಿ

May 15, 2020

ಮೈಸೂರು, ಮೇ 14- ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಯೋಜನೆಯನ್ನು 2020-21ನೇ ಸಾಲಿನಿಂದ ಸ್ಥಗಿತಗೊಳಿಸುವ ತೀರ್ಮಾನ ಮಾಡಿರುವ ಸರ್ಕಾರದ ನಿರ್ಧಾರವನ್ನು ತಕ್ಷಣ ವಾಪಸ್ಸು ಪಡೆಯುವಂತೆ ಮೈಸೂರು ಜಿಲ್ಲಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳ ಎಂಟು ಒಕ್ಕೂಟಗಳು ಇಂದು (ಮೇ 14) ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಈ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಪತ್ರ ಬರೆದಿರುವ ಒಕ್ಕೂಟಗಳು ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಸಾಂತ್ವನ ಕೇಂದ್ರಗಳಿವೆ. ಈ ಕೇಂದ್ರದಲ್ಲಿ ನಾಲ್ಕು ಮಂದಿ ಮಹಿಳಾ ಸಿಬ್ಬಂದಿ 20 ವರ್ಷ ಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರ ಕುಟುಂಬಗಳು ಇದನ್ನೇ ನಂಬಿ ಜೀವನ ನಡೆಸುತ್ತಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ಮಹಿಳಾ ಸಾಂತ್ವನ ಕೇಂದ್ರಗಳಿದ್ದು, ಅಂದಾಜು 800ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲಾ ಪದವಿ ಪಡೆದ ಮಹಿಳಾ ಸಿಬ್ಬಂದಿಗಳಾಗಿದ್ದಾರೆ. ಸರ್ಕಾರದ ಈ ನೀತಿಯಿಂದ ಇವರುಗಳೆಲ್ಲಾ ಸಂಕಷ್ಟಕ್ಕೀಡಾಗಲಿದ್ದಾರೆ. ಸರ್ಕಾರ ಇದಕ್ಕೆ ಆಸ್ಪದ ನೀಡಬಾರದೆಂದು ಒಕ್ಕೂಟ ಒತ್ತಾಯಿಸಿದೆ.

ಈ ಸಂಬಂಧ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ಸು ಪಡೆಯ ಬೇಕೆಂದು ಶಕ್ತಿಧಾಮ ಸೇವಾ ಸಂಸ್ಥೆ, ಮೈಸೂರು, ಒಡನಾಡಿ ಸೇವಾ ಸಂಸ್ಥೆ, ಮೈಸೂರು, ಅಖಿಲ ಭಾರತ ಮಹಿಳಾ ಸಮ್ಮೇಳನ, ನಂಜನಗೂಡು, ಮಹಾತ್ಮ ಗಾಂಧಿ ಟ್ರಸ್ಟ್, ಹುಣಸೂರು, ಶ್ರೀ ರಾಜೀವ್‍ಗಾಂಧಿ ಎಜುಕೇಷನ್ ಅಂಡ್ ವೆಲ್‍ಫೇರ್ ಟ್ರಸ್ಟ್, ಪಿರಿಯಾ ಪಟ್ಟಣ, ಮಾತೃಶ್ರೀ ವಿದ್ಯಾಸಂಸ್ಥೆ, ಕೆ.ಆರ್.ನಗರ, ಶ್ರೀ ಚಾಮುಂಡೇಶ್ವರಿ ಮಹಿಳಾ ಸಂಸ್ಥೆ, ಹೆಚ್.ಡಿ.ಕೋಟೆ ಹಾಗೂ ಜನೋದಯ ಸೇವಾ ಟ್ರಸ್ಟ್, ಟಿ.ನರಸೀಪುರ ಈ ಎಂಟು ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯಿಸಿದೆ. ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಿರಿಯಾಪಟ್ಟಣ ಶ್ರೀ ರಾಜೀವ್‍ಗಾಂಧಿ ಎಜುಕೇಷನ್ ಅಂಡ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಟಿ.ರಂಗಪ್ಪ, ಹುಣಸೂರಿನ ಮಹಾತ್ಮ ಗಾಂಧಿ ಟ್ರಸ್ಟ್ ಅಧ್ಯಕ್ಷ ಆದಿಶೇಷನ್‍ಗೌಡ, ಹೆಚ್.ಡಿ.ಕೋಟೆ ಶ್ರೀ ಚಾಮುಂಡೇಶ್ವರಿ ಮಹಿಳಾ ಸಂಸ್ಥೆಯ ರತ್ನಮ್ಮ ಹಾಗೂ ನಂಜನಗೂಡಿನ ಅಖಿಲ ಭಾರತ ಮಹಿಳಾ ಸಮ್ಮೇಳನದ ಪ್ರತಿನಿಧಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Translate »