ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ
ಮೈಸೂರು

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ

May 15, 2020

ಮೈಸೂರು, ಮೇ 14(ಪಿಎಂ)- ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ರೈತರ ಮರಣ ಶಾಸನ ಬರೆಯಲಿದೆ. ಭೂ ಸುಧಾ ರಣಾ ಕಾಯ್ದೆಯನ್ನೂ ತಿದ್ದುಪಡಿ ಮಾಡಿ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮ ಖಂಡ ನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಶ್ರೀಮಂತರು, ಬಂಡ ವಾಳಶಾಹಿಗಳನ್ನು ಓಲೈಸಲು ರೈತ ವಿರೋಧಿ ಕಾನೂನು ಜಾರಿಗೆ ತರುತ್ತಿದೆ. ಕೇಂದ್ರದ ಆಣತಿಯಂತೆ ರಾಜ್ಯ ಸರ್ಕಾರವೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಯತ್ನಿಸುತ್ತಿದೆ. ಈಗಾಗಲೇ ಲಾಕ್‍ಡೌನ್‍ನಿಂದ ರೈತ ರಿಗೆ ನ್ಯಾಯಯುತ ಬೆಲೆ ಸಿಗದೆ, ಬೆಳೆಯನ್ನು ರಸ್ತೆಗೆ ಸುರಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ರೈತರ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ರೈತ ರನ್ನು ಕಂಪನಿಗಳ ಹಿಡಿತಕ್ಕೆ ಸಿಲುಕಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನೂರಾರು ಕೈಗಾರಿಕೆಗಳು, ರಿಯಲ್ ಎಸ್ಟೇಟ್‍ನವರು ದೊಡ್ಡ ನಗರಗಳ ಸುತ್ತಲ ಫಲವತ್ತಾದ ಕೃಷಿ ಭೂಮಿ ಖರೀದಿಸಿ ಪಾಳು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರೈತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಎಚ್ಚರಿ ಸಿದರು. ಬಾಯಿಗೆ ಹಸಿರು ಶಾಲು ಸುತ್ತಿ ಪ್ರತಿಭಟನೆ ನಡೆ ಸಿದ ಪ್ರತಿಭಟನಾಕಾರರು, ನಂತರ ಎಡಿಸಿ ಪೂರ್ಣಿಮಾ ಅವರಿಗೆ ಮನವಿಪತ್ರ ಸಲ್ಲಿಸಿದರು. ಸಂಘದ ಅತ್ತಳ್ಳಿ ದೇವರಾಜ್, ಕಿರಗಸೂರು ಶಂಕರ್, ಸಿದ್ದೇಶ್, ಕೆ.ಆರ್. ರವೀಂದ್ರ, ಹಾಡ್ಯರವಿ, ಮಾದಪ್ಪ, ಕೃಷ್ಣೇಗೌಡ, ರಂಗ ರಾಜು, ಪರಶಿವಮೂರ್ತಿ, ರಾಜಣ್ಣ, ನಂಜುಂಡ ಸ್ವಾಮಿ, ಬರಡನಪುರ ನಾಗರಾಜ್ ಮತ್ತಿತರರಿದ್ದರು.

Translate »