ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ
ಮೈಸೂರು

ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ

September 27, 2020

ಬೆಂಗಳೂರು, ಸೆ.26(ಕೆಎಂಎಸ್)- ರೈತ ರಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇ ಯಕಕ್ಕೆ ರಾಜ್ಯ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ.

ತಿದ್ದುಪಡಿ ವಿಧೇಯಕವು ರೈತರ ಪಾಲಿಗೆ ಮರಣ ಶಾಸನವಾಗಿದ್ದು, ಈ ವಿಧೇಯಕ ವನ್ನು ಹಿಂದಕ್ಕೆ ಪಡೆಯುವಂತೆ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದರೂ ಇದಕ್ಕೆ ಮಣಿಯದ ಸರ್ಕಾರ ಜೆಡಿಎಸ್ ಬೆಂಬಲದೊಂದಿಗೆ ಕೃಷಿ ಭೂಮಿಯನ್ನು ಕೃಷಿಕರಲ್ಲದವರೂ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಕೈಗಾರಿಕೋದ್ಯಮ ಪ್ರೋತ್ಸಾ ಹಿಸಲು ಮತ್ತು ಯುವಕರನ್ನು ಕೃಷಿಗೆ ಸೆಳೆ ಯುವ ಉದ್ದೇಶದಿಂದ ಈ ಮಸೂದೆ ತರ ಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ತಿದ್ದುಪಡಿ ಮಸೂದೆ ಬಗ್ಗೆ ಸಮರ್ಥನೆ ಮಾಡಿಕೊಂಡರು.

ಕೃಷಿ ಭೂಮಿಯನ್ನು ಪೂರ್ಣ ಪ್ರಮಾಣ ದಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗು ತ್ತಿಲ್ಲ. ವಿದ್ಯಾವಂತರು, ಯುವಕರು ಕೃಷಿಗೆ ತೆರಳುವ ಆಸಕ್ತಿ ಹೊಂದಿದ್ದಾರೆ. ಆದರೆ, ಕಾಯ್ದೆ ಅವರ ಕೈ ಕಟ್ಟಿದೆ. ಒಂದೆಡೆ ಯುವಕರನ್ನು ಕೃಷಿಗೆ ಸೆಳೆಯುವುದರ ಜತೆಗೆ ನಿರುದ್ಯೋಗ ಸಮಸ್ಯೆ ಬಗೆಹರಿಸಿ ರಾಜ್ಯದ ಸಂಪನ್ಮೂಲ ಕ್ರೋಢೀಕರಣಕ್ಕೆ ಕೈಗಾರಿಕೆಗೆ ಒತ್ತು ಕೊಡ ಬೇಕಾಗಿದೆ. ಕೃಷಿಗೆ ಬಳಕೆಯಾಗದ ಭೂಮಿ ಯನ್ನು ಈ ಉದ್ದೇಶಗಳಿಗೆ ಬಳಸಿಕೊಂಡು ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದು. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸು ವುದು ಇದರ ಮೂಲ ಉದ್ದೇಶ.

ಯಾವುದೇ ವ್ಯವಹಾರಕ್ಕಾಗಲೀ ಅಥವಾ ರಿಯಲ್ ಎಸ್ಟೇಟ್‍ಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಇಂಥ ಕಾಯ್ದೆ ತಂದಿಲ್ಲ ಎಂದು ಅಶೋಕ್ ಸಮರ್ಥಿಸಿ ಕೊಂಡರು. ನೀವು ಈ ಹಿಂದೆ ತಂದಿದ್ದ ಕಾಯ್ದೆಯನ್ನೇ ನಾವು ಮತ್ತೊಮ್ಮೆ ಪರಾ ಮರ್ಶೆ ಮಾಡಿ ರಾಜ್ಯದ ಹಿತದೃಷ್ಟಿಯಿಂದ ಮಾರ್ಪಾಟು ಮಾಡಿದ್ದೇವೆ ಎಂದರು.

ವಿಧೇಯಕ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿ ಗಳು ಹಾಗೂ ರಿಯಲ್ ಎಸ್ಟೇಟ್‍ಗೆ ಅನುಕೂಲ ಮಾಡಲು ಇಂಥ ಕಾಯ್ದೆ ತರುತ್ತೀದ್ದೀರಿ, ಕಾಯ್ದೆಯನ್ನು ಹಿಂದಕ್ಕೆ ಪಡೆಯಿರಿ ಎಂದರು.

ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶ ದಿಂದಲೇ ಈ ಕಾಯ್ದೆ ತರಲಾಗುತ್ತಿದೆ. ದಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಯಾಗಿದ್ದಾಗ ಉಳುವವನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರೆ, ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನ ನ್ನಾಗಿ ಮಾಡಲು ಹೊರಟಿದೆ. ಕಾಯ್ದೆಯ 79 ಎ, 79 ಬಿ, ಸಿ ಹಾಗೂ 80ನೇ ಕಾಲಂ ಅನ್ನು ರದ್ದುಗೊಳಿಸಿ ಕಲಂ 63ರಲ್ಲಿ ನಿಗದಿ ಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ಹೊರಟ್ಟಿದ್ದೀರಿ. ಇದು ಕೃಷಿ ಕ್ಷೇತ್ರದ ಶವ ಪೆಟ್ಟಿಗೆಗೆ ಹೊಡೆದಿರುವ ಕೊನೆ ಮೊಳೆಯಾಗಿದೆ ಎಂದು ಕಿಡಿ ಕಾರಿದರು.

ಈ ಎಲ್ಲ ಸೆಕ್ಷನ್‍ಗಳು ಭೂ ಮಾಲೀಕರ ದೌರ್ಜನ್ಯದಿಂದ ಸಣ್ಣ ರೈತರನ್ನು ರಕ್ಷಿಸುವ, ಸಣ್ಣಪುಟ್ಟ ಹಿಡುವಳಿದಾರರ ಅಸಹಾಯಕತೆ ಯನ್ನು ಶ್ರೀಮಂತರಿಂದ ರಕ್ಷಿಸುವುದಾಗಿತ್ತು. ಇವೆಲ್ಲವನ್ನೂ ಗಾಳಿಗೆ ತೂರಿ ಬಂಡವಾಳಶಾಹಿಗಳ ಕೈಗೆ ಕೊಡುತ್ತಿದ್ದೀರಿ ಎಂದು ದೂರಿದರು. ಕಾಯ್ದೆ ಉಲ್ಲಂಘನೆ ಮಾಡಿದ 60 ಸಾವಿರ ಎಕರೆ ಜಮೀನನ್ನು ಸಕ್ರಮ ಗೊಳಿಸಿ ಲಕ್ಷಾಂತರ ಕೋಟಿ ರೂ. ಅವ್ಯವಹಾರಕ್ಕೆ ಎಡೆಮಾಡಿದ್ದೀರಿ ಎಂದು ದೂರಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, 2 ಬಾರಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಸದನದ ಕಾರ್ಯಕಲಾಪ ಗಳಲ್ಲಿ ಸರಿಯಾಗಿ ಭಾಗವಹಿಸಲಾಗಲಿಲ್ಲ. ಕೋವಿಡ್‍ನಿಂದÀ ಎಲ್ಲ ವಲಯಗಳಲ್ಲಿ ಮೈನಸ್ ಇದೆ. ಆದರೆ, ರೈತರು ಮಾತ್ರ ಬೇಸಾಯ ನಿಲ್ಲಿಸಲ್ಲ. ಸರ್ಕಾರದ ಮಾಹಿತಿಯ ಪ್ರಕಾರವೇ ಈ ಬಾರಿ ಹೆಚ್ಚು ಬಿತ್ತನೆಯಾಗಿದೆ. ಹೀಗಾಗಿ ಕೃಷಿ ವಲಯವನ್ನು ಲಘುವಾಗಿ ಪರಿಗಣಿಸಬಾರದು. ಕಾಯ್ದೆಯ ಕೆಲವು ನ್ಯೂನತೆಗಳನ್ನು ಸರಿಪಡಿಸದೆ ವಿಧೇಯಕ ತಂದರೆ ಉಪಯೋಗ ಆಗುವು ದಿಲ್ಲ. ಸ್ವತಃ ನಾನೇ ಸಮಸ್ಯೆಯನ್ನು ಅನುಭವಿಸಿದ್ದೇನೆ. ಇನ್ನು ಸಾಮಾನ್ಯ ರೈತರ ಪಾಡೇನು ಎಂದರು. ಭೂಸ್ವಾಧೀನದಿಂದ ಕೈಬಿಟ್ಟ ಜಮೀನು ರೈತರ ಬಳಿ ಇದೆಯೋ ಅಥವಾ ಜಿಪಿಎದಾರರ ಪಾಲಾಗಿದೆಯೋ ಎಂದು ಪ್ರಶ್ನಿಸಿದರು. ಕಾಯ್ದೆಯ ನ್ಯೂನತೆ ಸರಿಪಡಿಸಿ ಸುಧಾರಣೆ ತರಬೇಕು. ಕೆಲವು ಬದಲಾವಣೆ ತರುವುದಾದರೆ ಸ್ವಾಗತಿಸುತ್ತೇನೆ ಎಂದರು. ಬಳಿಕ ಕೆಲವು ತಿದ್ದುಪಡಿಯೊಂದಿಗೆ ಕಾಂಗ್ರೆಸ್ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ಅವಿಶ್ವಾಸ ನಿರ್ಣಯಕ್ಕೆ ಸೋಲು ಅನಿರ್ದಿಷ್ಟಾವಧಿಗೆ ವಿಧಾನಸಭೆ ಅಧಿವೇಶನ ಮುಂದೂಡಿಕೆ
ಬೆಂಗಳೂರು, ಸೆ.26-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾ ರದ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಶನಿವಾರ ಸೋಲುಂಟಾಯಿತು. ಇನ್ನು 6 ತಿಂಗಳ ಕಾಲ ಸರ್ಕಾರಕ್ಕೆ ನಿಶ್ಚಿಂತೆ. ಧ್ವನಿ ಮತದ ಮೂಲಕ ಇಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ವಿಧಾನಸಭೆಯು ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಬೆನ್ನಲ್ಲೇ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿಮತದ ಮೂಲಕ ನಿರ್ಧಾರ ಕೈಗೊಳ್ಳಲು ವಿಧಾನಸಭೆಯಲ್ಲಿ ತೀರ್ಮಾನಿಸಲಾಯಿತು. ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿರುವ ಹಿನ್ನೆಲೆ ಯಲ್ಲಿ ಕೋವಿಡ್ ಪಾಸಿಟಿವ್ ಬಂದಿರುವ ಶಾಸಕರನ್ನು ಸದನಕ್ಕೆ ಕರೆಸಲು ಸಾಧ್ಯವಿಲ್ಲ ದಿರುವ ಕಾರಣ ಮತದಾನಕ್ಕೆ ಅವಕಾಶವಿಲ್ಲ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು. ಕೆಲವು ಸಚಿವರು ಹಾಗೂ ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದರಿಂದ ಅವಿಶ್ವಾಸ ನಿರ್ಣಯವನ್ನು ಮತ ವಿಭಜನೆಗೆ ಒತ್ತಾಯಿಸದೆ ಧ್ವನಿಮತದ ಮೂಲಕ ತೀರ್ಮಾನ ಕೈಗೊಳ್ಳಲು ವಿಧಾನಸಭೆಯಲ್ಲಿಂದು ಮತ ಸಮ್ಮತ ನಿರ್ಧಾರ ಕೈಗೊಳ್ಳಲಾಯಿತು. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಸದನದಲ್ಲಿ 4 ಮಸೂದೆಗಳ ಚರ್ಚೆ ಮತ್ತು ಅಂಗೀಕಾರವಾಗಬೇಕಾಗಿದೆ. ಹಾಗೆಯೇ ಮಹತ್ವದ ಅವಿಶ್ವಾಸ ನಿರ್ಣಯದ ಬಗ್ಗೆಯೂ ಚರ್ಚೆ ನಡೆಸಬೇಕಿದೆ ಎಂದಾಗ ಎದ್ದು ನಿಂತ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ನಾನು ಕಳೆದ ಗುರುವಾರ ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲದ ಮೇಲೆ ಈ ಸದನ ವಿಶ್ವಾಸ ಕಳೆದುಕೊಂಡಿದೆ ಎಂಬ ನಿರ್ಣಯವನ್ನು ಮಂಡಿಸಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದರು.

ಆಗ ಸಭಾಧ್ಯಕ್ಷರು ಕಾರ್ಯಕಲಾಪ ಪಟ್ಟಿಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯನ್ನು ಸೇರಿಸಲಾಗಿದೆ. ಮಧ್ಯಾಹ್ನದ ನಂತರ ಚರ್ಚೆಗೆ ಅವಕಾಶ ಕೊಡುತ್ತೇನೆ ಮೊದಲು ಮಸೂದೆ ಗಳನ್ನು ಅಂಗೀಕರಿಸೋಣ ನಂತರ ಮಧ್ಯಾಹ್ನ 3 ಗಂಟೆಗೆ ಅವಿಶ್ವಾಸ ನಿರ್ಣಯದ ಚರ್ಚೆ ಯನ್ನು ಕೈಗೆತ್ತಿಕೊಳ್ಳುತ್ತೇನೆ ಎಂದರು. ಆದರೆ ಕೊರೊನಾ ಸೋಂಕಿಗೆ ಒಳಗಾಗಿರುವ ಸದಸ್ಯರನ್ನು ಸದನಕ್ಕೆ ಬಿಡಲು ಅವಕಾಶವಿಲ್ಲ. ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತ ಶಾಸಕ ರನ್ನು ಸದನಕ್ಕೆ ಕರೆ ತರಲು ಅವಕಾಶ ನೀಡುವುದಿಲ್ಲ. ಹೀಗೆ ಮಾಡುವುದು ಸರಿಯಲ್ಲ. 25ಕ್ಕೂ ಹೆಚ್ಚು ಶಾಸಕರು, 6-7 ಸಚಿವರಿಗೆ ಕೊರೊನಾ ಪಾಸಿಟಿವ್ ಇದೆ. ಇವg Àನ್ನು ಸದನಕ್ಕೆ ಬಿಟ್ಟುಕೊಳ್ಳುವುದು ಸೂಕ್ತವಲ್ಲ. ಸದನದ ಘನತೆ, ಗೌರವ ದೃಷ್ಟಿಯಿಂದ ಈ ರೀತಿ ಪಿಪಿಇ ಕಿಟ್ ಧರಿಸಿ ಬರುವುದು ಸರಿ ಎನಿಸುವುದಿಲ್ಲ. ಹಾಗಾಗಿ ವಿರೋಧ ಪಕ್ಷದ ನಾಯಕರುಗಳು ಮತ ವಿಭಜನೆಗೆ ಒತ್ತಾಯಿಸದೆ ಸಹಕರಿಸಬೇಕು ಎಂದರು.

ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ ಅಂಗೀಕಾರ
ಬೆಂಗಳೂರು,ಸೆ.26-ವಿತ್ತೀಯ ಹೊಣೆಗಾರಿಕೆಯಡಿ ಸಾಲ ಮಾಡುವ ಪ್ರಮಾಣದ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಹೆಚ್ಚಳ ಮಾಡುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ 2020 ಅನ್ನು ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಗೈರಿನ ನಡುವೆ ಅಂಗೀಕರಿಸಲಾಯಿತು.

ವಿಧಾನ ಪರಿಷತ್‍ನಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಆದಾಯ ಮತ್ತು ವಿತ್ತೀಯ ಕೊರತೆ ನಡುವೆ ಹೊಂದಾಣಿಕೆ ಅಗತ್ಯವಿದೆ. ಶೇ.3ಕ್ಕಿಂತ ಹೆಚ್ಚು ವಿತ್ತೀಯ ಕೊರತೆ ಇರಬಾರದು ಎಂದು ಕೇಂದ್ರ ತೀರ್ಮಾನಿಸಿತ್ತು. ಆದರೆ ಕೋವಿಡ್ ಕಾರಣದಿಂದ ಈ ಬಾರಿ ಶೇ.23 ಆದಾಯ ಕಡಿತವಾಗಿದೆ ಹಾಗಾಗಿ ಶೇ.3ರಿಂದ ಶೇ.5ರಷ್ಟು ಮಾಡಿಕೊಳ್ಳಬಹುದು. ಇದರಿಂದ ಹೆಚ್ಚುವರಿ ಸಾಲ ಮಾಡಿ ಆರ್ಥಿಕ ಕೊರತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು. ನಮಗೆ 179920 ಕೋಟಿ ರೂ. ಆದಾಯ ಬರಬೇಕಿತ್ತು ಆದರೆ 114658 ಕೋಟಿ ರೂ. ಮಾತ್ರ ಸಂಗ್ರಹ ವಾಗಿದೆ. 65262 ಕೋಟಿ ಆದಾಯ ಕಡಿತವಾಗಿದೆ, ವೇತನ ಪಾವತಿ, ಪಿಂಚಣಿ ಇತ್ಯಾದಿ ನಿರ್ವಹಣೆಗೆ 150240 ಕೋಟಿ ವೆಚ್ಚ ಬರಬೇಕಿದೆ.

87650 ಕೋಟಿ ಸ್ಕೀಂಗಳಿಗೆ ಇರಿಸಲಾಗಿತ್ತು. ಆದರೆ ಈಗ ವರಮಾನ ಶೂನ್ಯವಾಗಿದೆ. ಹೆಚ್ಚುವರಿ ವೆಚ್ಚವಾಗಿದೆ ಎಂದು ವಿವರಿಸಿದರು. ರಾಜ್ಯಕ್ಕೆ 11324 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಬರಬೇಕಿದೆ. ಇದನ್ನು ಕೇಂದ್ರ ಜವಾಬ್ದಾರಿ ತೆಗೆದುಕೊಂಡು ನೀಡಲಿದೆ. ಆದರೂ ವಿತ್ತೀಯ ಕೊರತೆ ಮಿತಿಯನ್ನು ಶೇ.5ಕ್ಕೆ ಹೆಚ್ಚಿಸಿದರೆ ರಾಜ್ಯಕ್ಕೆ ಕಷ್ಟವಾಗಲಿದೆ. ಇಂದು ಸಾಲ ಪಡೆಯದೇ ಸರ್ಕಾರ ನಡೆಸಲು ಸಾಧ್ಯವಿಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ಕೇಂದ್ರದ ಮೇಲೆ ಒತ್ತಡ ಹಾಕಲು ರಾಜ್ಯ ಸರ್ಕಾರ ವಿಫಲವಾಗಿದೆ. ಒತ್ತಡ ಹಾಕಿ ಜಿಎಸ್ ಟಿ ಪರಿಹಾರ ಪಡೆದುಕೊಳ್ಳಬೇಕು. ನಾವು ಸಂಗ್ರಹಿಸಿ ಕೊಟ್ಟ ಹಣ ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಕೇಂದ್ರ ಕೊಡದಿದ್ದರೆ ರಾಜ್ಯ ಸರ್ಕಾರ ಏನು ಮಾಡಬೇಕು. ಸಿಎಂ ಬಂದು ಉತ್ತರ ನೀಡಲಿ ಎಂದು ಆಗ್ರಹಿಸಿದರು.

 

Translate »