‘ಗಂಧದ ಗುಡಿ’ ಅಪ್ಪಿದ ಅಪ್ಪು ಅಭಿಮಾನಿಗಳು
ಮೈಸೂರು

‘ಗಂಧದ ಗುಡಿ’ ಅಪ್ಪಿದ ಅಪ್ಪು ಅಭಿಮಾನಿಗಳು

October 29, 2022

ಮೈಸೂರು, ಅ. 28(ಆರ್‍ಕೆ)- ಇಂದು ಬಿಡುಗಡೆಯಾದ ಪವರ್‍ಸ್ಟಾರ್ ದಿವಂಗತ ಡಾ. ಪುನೀತ್ ರಾಜ್‍ಕುಮಾರ್ ಅವರ ಅಭಿನಯದ ಕಡೇ ಚಿತ್ರ ‘ಗಂಧದ ಗುಡಿ’ಗೆ ಮೈಸೂರಲ್ಲಿ ಅಭೂತಪೂರ್ವ ಸ್ವಾಗತ ದೊರೆಯಿತು. ತಮ್ಮ ನೆಚ್ಚಿನ ಅಪ್ಪು ಅಗಲಿಕೆ ನಡುವೆ ಸಂಭ್ರಮದಿಂದ ಚಿತ್ರ ವೀಕ್ಷಿಸಿ, ಕೊನೆಗೆ ಕಣ್ಣೀರಿಟ್ಟರು.
ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಪರಿಚಯಿಸುವ ಪಿಆರ್‍ಕೆ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಪ್ರಶಸ್ತಿ ವಿಜೇತ ಫಿಲಂ ಮೇಕರ್ ಜೆ.ಎಸ್. ಅಮೋಘವರ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಇಂದು ಮೈಸೂರಿನ ಸಂಗಂ ಚಿತ್ರಮಂದಿರ ದಲ್ಲಿ ಪ್ರದರ್ಶನಗೊಂಡಿತು. ಡಾ.ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ನಾಳೆ (ಅ. 29)ಗೆ ಒಂದು ವರ್ಷ. ಮೊದಲ ವರ್ಷದ ಪುಣ್ಯಸ್ಮರಣೆ ಮುನ್ನಾ ದಿನವಾದ ಇಂದು ರಾಜ್ಯಾದ್ಯಂತ 1,500 ಸ್ಕ್ರೀನ್‍ಗಳಲ್ಲಿ ಅವರು ಅಭಿನಯಿಸಿದ ಕಡೇ ಚಿತ್ರ ‘ಗಂಧದ ಗುಡಿ’ ಬಿಡುಗಡೆಯಾಗಿದೆ. ಮೈಸೂರಲ್ಲಿ ಬೆಳಗ್ಗೆ 6.30 ಗಂಟೆಗೆ ಸಂಗಂ ಟಾಕೀಸ್ ಮತ್ತು ಎಲ್ಲಾ ಮಲ್ಟಿಪ್ಲೆಕ್ಸ್‍ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಕೇವಲ 1 ಗಂಟೆ 6 ನಿಮಿಷ ಅವಧಿಯ ಗಂಧದ ಗುಡಿಯನ್ನು ಪ್ರತೀ ಸ್ಕ್ರೀನ್‍ನಲ್ಲಿ ಇಂದು 6 ಪ್ರದರ್ಶನ ಮಾಡಲಾಯಿತು. ಬೆಳಗ್ಗೆ 6.30ರಿಂದ ರಾತ್ರಿ 10 ಗಂಟೆವರೆಗೆ ನಿರಂತರವಾಗಿ ಚಿತ್ರ ಪ್ರದರ್ಶಿಸಿದರೂ ಎಲ್ಲಾ ಶೋಗಳಿಗೂ ಪ್ರೇಕ್ಷಕರು ಕಿಕ್ಕಿರಿದು ಚಿತ್ರ ವೀಕ್ಷಿಸಿದರು. ಬಿಡುಗಡೆ ದಿನವೇ ಮೊದಲ ಪ್ರದರ್ಶನದಲ್ಲೇ ನೋಡಬೇಕೆಂಬ ಅಭಿಮಾನಿಗಳ ಮಹದಾಸೆಯಿಂದ ನಿನ್ನೆ (ಅ. 27)ಯೇ ಎಲ್ಲಾ ಸ್ಕ್ರೀನ್‍ಗಳಲ್ಲೂ ಇಂದಿನ ಪ್ರದರ್ಶನದ ಟಿಕೆಟ್‍ಗಳು ಸೋಲ್ಡ್‍ಔಟ್ ಆಗಿದ್ದವು.

ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಸಂಗಂ ಟಾಕೀಸ್‍ನಲ್ಲಿ ಪುನೀತ್ ಮೊದಲ ದೃಶ್ಯ ಕಣ್ಣಿಗೆ ಬೀಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮದ ಜೊತೆಗೆ ಭಾರೀ ಅಳು, ಆಕ್ರಂದನದ ಜೊತೆಗೆ ಜೋರಾಗಿ ಕೂಗಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಅಪ್ಪುವಿನ ಅಭಿನಯ, ಭಾವನಾತ್ಮಕ ಮಾತುಗಳನ್ನು ಕೇಳಿ ಮೂಕವಿಸ್ಮಿತರಾದರು.

ಕಾಡಿನೊಳಗೆ ಹಾವುಗಳಿರುವ ಸ್ಥಳಕ್ಕೆ ಸ್ನೇಹಿತನೊಂದಿಗೆ ಹೋಗುವ ಪುನೀತ್, “ಸೇಫಾಗಿದೆಯಾ ಈ ಜಾಗ? ಏಕೆಂದರೆ ಹಾವುಗಳನ್ನು ಕಂಡರೆ ನನಗೆ ಭಯ. ಮನೆಯಲ್ಲಿ ಹೆಂಡತಿ-ಮಕ್ಕಳು ಕಾಯುತ್ತಿರುತ್ತಾರೆ. ಅಲ್ಲದೆ ಇನ್ನೂ 2-3 ಸಿನೆಮಾ ಬಾಕಿ ಇದೆ” ಎನ್ನುವ ಅಪ್ಪು ಅವರ ಸಹಜ ಮಾತುಗಳಿಗೆ ‘ಅಯ್ಯೋ ಭಗವಂತ’ ಎಂದು ಗದ್ಗದಿತರಾದ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕಣ್ಣೀರು ಸುರಿಸಿದರು.

ಪುನೀತ್ ರಾಜ್‍ಕುಮಾರ್ ಅವರ ಪ್ರತಿ ಮಾತು, ಅಭಿನಯದ ಪ್ರತೀ ಸಂದರ್ಭದಲ್ಲೂ ಭಾವುಕರಾಗುತ್ತಿದ್ದ ಅಭಿಮಾನಿಗಳು ಸಿನೆಮಾ ಮುಗಿಯುವವರೆಗೂ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸಿನೆಮಾ ಸ್ಕ್ರೀನ್‍ಗಳ ಮುಂದೆ ದುಃಖದ ಛಾಯೆ ಆವರಿಸಿದರೆ, ಟಾಕೀಸ್ ಹೊರಗಡೆ, ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳ ಬಳಿ ಸಂಭ್ರಮಾಚರಣೆ ಮಾಡಿ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಕಂಡುಬಂದಿತು. ಥಿಯೇಟರ್‍ಗಳಲ್ಲಿ ಅಪ್ಪು ಲೈಫ್‍ಸೈಜ್ ಕಟೌಟ್, ಫ್ಲೆಕ್ಸ್‍ಗಳನ್ನು ಅಳವಡಿಸಿ ಪುಷ್ಪಾಲಂಕಾರ ಮಾಡಿ, ಜಾನಪದ ಕಲಾವಿದರ ಡೊಳ್ಳು, ತಮಟೆ ಶಬ್ಧಕ್ಕೆ ಅಭಿಮಾನಿಗಳು ಹೆಜ್ಜೆ ಹಾಕಿ ಜೈಕಾರದೊಂದಿಗೆ ‘ಗಂಧದ ಗುಂಡಿ’ ಚಿತ್ರವನ್ನು ಅದ್ಧೂರಿಯಾಗಿ ಅಪ್ಪಿಕೊಂಡರು. ಕೆಲವೆಡೆ ಗಂಧದ ಗುಡಿ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಚಿತ್ರಮಂದಿರ, ಮಲ್ಟಿಪ್ಲೆಕ್ಸ್‍ಗಳ ಬಳಿ ಅಪ್ಪು ಕಟೌಟ್‍ಗಳಿಗೆ ಭಾರೀ ಗಾತ್ರದ ಹಾರ ಹಾಕಿ ಸಂಭ್ರಮಿಸಿದ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಕೆಲವೆಡೆ ಅಪ್ಪು ಕಟೌಟ್‍ಗಳಿಗೆ ಕ್ಷೀರಾಭಿಷೇಕ ಮಾಡಿ, ಪಟಾಕಿಗಳನ್ನು ಸಿಡಿಸಿ ‘ಗಂಧದ ಗುಡಿ’ಯನ್ನು ಸ್ವಾಗತಿಸಿದ ಅಭಿಮಾನಿಗಳು, ಕೇಕ್ ಕತ್ತರಿಸಿದರು. ಕಾಡಿನಲ್ಲಿ ನೈಸರ್ಗಿಕ ಸಂಪತ್ತು, ಬಯೋ ಡೈವರ್ಸಿಟಿ (ಜೀವ ವೈವಿಧ್ಯ)ಯ ಇತಿಹಾಸ, ಹಿನ್ನೆಲೆಯನ್ನು ಕಣ್ಮುಂದೆ ತಂದಿರುವ ನಿರ್ದೇಶಕ ಅಮೋಘವರ್ಷ, ಆ ಮೂಲಕ ಅಪ್ಪು ಅವರ ಮೂಲಕ ಪ್ರಾಣಿ ಜಗತ್ತನ್ನೂ ‘ಗಂಧದ ಗುಡಿ’ ಮೂಲಕ ಅನಾವರಣಗೊಳಿಸಿದ್ದಾರೆ. ಇಂದು ಮೊದಲ ದಿನದ ಮೊದಲ ಪ್ರದರ್ಶನ ವೀಕ್ಷಿಸಿ ಕಣ್ಣೀರಿಡುತ್ತಲೇ ಹೊರ ಬಂದ ಅಪ್ಪು ಅಭಿಮಾನಿ, ವಿಜಯನಗರ ರೈಲ್ವೇ ಲೇಔಟ್ ಇಂಜಿನಿಯರಿಂಗ್ ಪದವೀಧರ ಆಕಾಶ್, ‘ಗಂಧದ ಗುಡಿ’ ಚಿತ್ರದ ಮೂಲಕ ಅಪ್ಪು ನಾನು ಇನ್ನು ನಿಮ್ಮೊಂದಿಗೆ ಜೀವಂತವಾಗಿದ್ದೇವೆ ಎಂಬ ಸಂದೇಶ ಸಾರಿದ್ದಾರೆ. ಅವರ ಒಂದೊಂದು ಮಾತು, ಅಭಿನಯವೂ ಹೃದಯ ಕಲಕುವಂತಿದೆ ಎಂದರು.

“ಅಪ್ಪು ಅವರು ನಮ್ಮ ನಡುವೆಯೇ ಇದ್ದಾರೆ. ಗಂಧದ ಗುಡಿ ಚಿತ್ರವನ್ನು ಮತ್ತೆ ಮತ್ತೆ ನೋಡಬೇಕು. ಚಿತ್ರ ಆರಂಭದಿಂದ ಅಂತ್ಯದವರೆಗೂ ನಮ್ಮ ಭಾವನೆಗಳೊಂದಿಗೆ ಬೆಸೆಯುತ್ತದೆ. ಇಂತಹ ಸಿನೆಮಾ ಇನ್ನೊಂದು ಬರಲು ಸಾಧ್ಯವಿಲ್ಲ” ಎಂದು ಮತ್ತೋರ್ವ ಯುವಕ ಎಸ್.ಆರ್. ಯಶಸ್ ಭಾರವಾದ ಹೃದಯದಿಂದ ನುಡಿದ. ಒಟ್ಟಾರೆ ಅಪ್ಪು ಅವರ ಕಡೇ ಚಿತ್ರಕ್ಕೆ ಇನ್ನಿಲ್ಲದ ಪ್ರಶಂಸೆ, ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಥಿಯೇಟರ್‍ನಲ್ಲಿ ಟಿಕೆಟ್‍ಗಳು ಒಂದು ದಿನ ಮುಂಚಿತವಾಗಿಯೇ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಆಗುತ್ತಿವೆ. ಇನ್ನೂ ಒಂದು ವಾರ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಆಯಾ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಸಿನೆಮಾ ಪ್ರದರ್ಶನ ಸ್ಥಳದಲ್ಲಿ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.

Translate »