ಕಾವೇರಿ, ಕೃಷ್ಣಾ ಕೊಳ್ಳದ ಕೈಗಾರಿಕೆಗಳಲ್ಲಿ ಶುದ್ಧೀಕರಣ ಘಟಕ ಸ್ಥಾಪನೆಗೆ ಕಟ್ಟಾದೇಶ
News

ಕಾವೇರಿ, ಕೃಷ್ಣಾ ಕೊಳ್ಳದ ಕೈಗಾರಿಕೆಗಳಲ್ಲಿ ಶುದ್ಧೀಕರಣ ಘಟಕ ಸ್ಥಾಪನೆಗೆ ಕಟ್ಟಾದೇಶ

October 29, 2022

ಬೆಂಗಳೂರು, ಅ.28(ಕೆಎಂಶಿ)-ಕಾವೇರಿ ಕೃಷ್ಣ ಕೊಳ್ಳ ಕಲುಷಿತಗೊಳ್ಳಲು ಅಧಿಕಾರಿಗಳೇ ಹೊಣೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದ್ದರೆ, ನದಿ ಗಳಿಗೆ ಕಲುಷಿತ ನೀರು ಹರಿಯು ತ್ತಿರಲಿಲ್ಲ. ಕೆಲವು ಕೈಗಾರಿಕೆಗಳು ತಮ್ಮ ಜವಾಬ್ದಾರಿ ಮರೆತು ರಾಸಾಯನಿಕ ಮಿಶ್ರಿತ ನೀರನ್ನು ನದಿ ಪಾತ್ರಗಳಿಗೆ ಹರಿಯಬಿಟ್ಟು ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇದರ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದೇ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಇವರ ಅಸಡ್ಡೆಯಿಂದ ಜನ- ಜಾನುವಾರುಗಳು ಕಾಯಿಲೆಯಿಂದ ನರಳುವಂತಾಗಿದೆ. ಬೆಳೆಗಳು ಒಂದಲ್ಲ ಒಂದು ರೀತಿಯ ಕೀಟಗಳಿಗೆ ತುತ್ತಾಗುತ್ತಿವೆ. ಇದರ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಸರ ಮಂಡಳಿ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನದಿ ಭಾಗದಲ್ಲಿರುವ ಎಲ್ಲಾ ಕೈಗಾರಿಕೆಗಳು ತಕ್ಷಣವೇ ಶುದ್ಧಿಕರಣ ಘಟಕಗಳನ್ನು ಪ್ರಾರಂಭಿಸಬೇಕು. ಸರ್ಕಾರಿ ಆದೇಶವನ್ನು ಧಿಕ್ಕರಿಸಿ, ನದಿಗಳಿಗೆ ಕಲುಷಿತ ನೀರನ್ನು ಹರಿಸಿದ್ದಲ್ಲಿ, ಕೈಗಾರಿಕೆ ಗಳನ್ನು ಬಂದ್ ಮಾಡುವಂತೆ ಕಟ್ಟಾದೇಶ ಮಾಡಿ ದ್ದಾರೆ ಎಂದರು. ರಾಜ್ಯದ ಇತಿಹಾಸದಲ್ಲೇ ನೀರಾ ವರಿ ಯೋಜನೆಗಳಿಗೆ ಪ್ರಸಕ್ತ ವರ್ಷ 20 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದ್ದೇವೆ.

ರಾಜ್ಯದಲ್ಲಿ ಒಟ್ಟಾರೆ 66 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ತೆಗೆಯಬಹುದು. ಆದರೆ ನಾವು ಇದುವರೆಗೂ 51 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರುಣಿಸಿದ್ದೇವೆ.

ಬೃಹತ್ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಉಳಿದಿರುವ 15 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ. ಕಾವೇರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಮ್ಮ ನೀರಿನ ಪಾಲನ್ನು ಸದುಪಯೋಗ ಪಡೆದುಕೊಳ್ಳಲು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.

ಭದ್ರಾ ಯೋಜನೆಗೆ ಯಾವುದೇ ಕ್ಷಣದಲ್ಲಿ ರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ಇದಾದ ನಂತರ ಅದರ ಖರ್ಚು-ವೆಚ್ಚಗಳಲ್ಲಿ ಕೇಂದ್ರ ಸರ್ಕಾರ ಶೇ.60ರಷ್ಟು ಪಾಲನ್ನು ನೀಡಲಿದೆ ಎಂದರು. ಈ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಮಾರ್ಚ್ ಅಂತ್ಯದೊಳಗಾಗಿ 10 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ತೀರ್ಮಾನಿಸಲಾಗಿದ್ದು, 1964 ರಿಂದ ಇದುವರೆಗೆ ಕೃಷ್ಣಾ ನದಿ ಪಾತ್ರದ ಯೋಜನೆಗಳಿಗೆ ಈ ಪ್ರಮಾಣದ ಹಣವನ್ನು ನೀಡಿರಲಿಲ್ಲ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ 76 ಸಾವಿರ ಎಕರೆ ಭೂಮಿ ಬೇಕಿದ್ದು, ಈ ಪೈಕಿ 26 ಸಾವಿರ ಎಕರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಉಳಿದ 51 ಸಾವಿರ ಎಕರೆ ಭೂಮಿಯ ಸ್ವಾಧೀನಕ್ಕೆ ಕ್ರಮ ತೆಗೆದುಕೊಳ್ಳ ಲಾಗಿದೆ. ಇನ್ನು ಯೋಜನೆಯ ವ್ಯಾಪ್ತಿಯಲ್ಲಿ 3700 ಮನೆಗಳಿದ್ದು, ಭೂ ಸ್ವಾಧೀನ ಮತ್ತು ಮನೆಗಳಿಗೆ ಪರಿಹಾರ ನೀಡುವ ಸಲುವಾಗಿ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

Translate »