ರಾಜ್ಯದ ದಶ ದಿಕ್ಕುಗಳಲ್ಲೂ ಮೊಳಗಿದ ನಾಡು-ನುಡಿ, ಹಿರಿಮೆ-ಗರಿಮೆ ಬಿಂಬಿಸುವ ಕನ್ನಡಿಗನ ಕೋಟಿ ಕಂಠ ಗಾಯನ…
News

ರಾಜ್ಯದ ದಶ ದಿಕ್ಕುಗಳಲ್ಲೂ ಮೊಳಗಿದ ನಾಡು-ನುಡಿ, ಹಿರಿಮೆ-ಗರಿಮೆ ಬಿಂಬಿಸುವ ಕನ್ನಡಿಗನ ಕೋಟಿ ಕಂಠ ಗಾಯನ…

October 29, 2022

ಬೆಂಗಳೂರು, ಅ.28(ಕೆಎಂಶಿ)-ಕನ್ನಡ ನಾಡು-ನುಡಿಯ ಹಿರಿಮೆ-ಗರಿಮೆಯನ್ನು ಸಾರುವ ಕನ್ನಡದ ಹಾಡುಗಳು ರಾಜ್ಯದ ದಶದಿಕ್ಕುಗಳಲ್ಲೂ ಮೊಳಗಿತು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರ ಆಯೋಜಿಸಿದ್ದ, ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ಜನ ಏಕ ಕಂಠದಲ್ಲಿ ಆಯ್ದ ಆರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ನಾಡು ನುಡಿಯ ಕಂಪು ಎಲ್ಲೆಡೆ ಪಸರಿಸಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಸಂಸ್ಕøತಿ ಸಚಿವ ಸುನೀಲ್ ಕುಮಾರ್ ರಾಜಧಾನಿ ಯಲ್ಲೂ ಅವರ ಸಂಪುಟದ ಸಹೋದ್ಯೋಗಿಗಳು ಜಿಲ್ಲಾ ಕೇಂದ್ರಗಳಲ್ಲಿ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡು ಕನ್ನಡ ನಾಡು ನುಡಿಯ ಹಿರಿಮೆ ಗರಿಮೆಯನ್ನು ಏಕಕಾಲದಲ್ಲಿ ಮೊಳಗಿಸಿದರು.
ರಾಜ್ಯದ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಕನ್ನಡದ ಹಾಡುಗಳ ಗಾಯನ ನಡೆದಿದ್ದು, ಕನ್ನಡದ ಸಂಸ್ಕೃತಿ, ಪರಂಪರೆ ಮತ್ತಷ್ಟು ಎತ್ತರಕ್ಕೆ ಏರಿದಂತಾಯಿತು. ಗಡಿನಾಡು, ಹೊರದೇಶ, ಹೊರ ರಾಜ್ಯಗಳು ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕರು ಈ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯೊಂದಿಗೆ ಆರಂಭ ವಾಗಿ ಹುಯಿಲಗೋಳ ನಾರಾಯಣರಾವ್ ವಿರಚಿತ `ಉದಯವಾಗಲಿ ನಮ್ಮ ಚಲುವ ಕನ್ನಡನಾಡು’, ಡಾ. ಚೆನ್ನವೀರ ಕಣವಿ ಅವರ `ವಿಶ್ವ ವಿನೂತನ ವಿದ್ಯಾಚೇತನ’, ಕುವೆಂಪುರವರ `ಬಾರಿಸು ಕನ್ನಡ ಡಿಂಡಿಮವ’, ಡಾ. ಡಿ.ಎಸ್. ಕಲ್ಕಿ ಅವರ `ಹಚ್ಚೇವು ಕನ್ನಡ ದೀಪ’ ಹಾಗೂ ಡಾ. ಹಂಸಲೇಖ ಅವರ `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹೀಗೆ ಆರು ಗೀತೆಗಳನ್ನು ಈ ಸಂದರ್ಭದಲ್ಲಿ ಹಾಡಲಾಯಿತು.

ಗಾಯನದ ನಂತರ ಕನ್ನಡನಾಡಿನ ಪ್ರಜೆಯಾಗಿ ನಾನು ನನ್ನ ನಾಡು ನುಡಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ನಾನು ಕನ್ನಡದಲ್ಲೇ ಮಾತನಾಡು ತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ, ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡ ನಾಡಿನಲ್ಲಿ ರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುತ್ತೇನೆ ಎಂದು ಸಂಕಲ್ಪ ತೊಡುತ್ತೇನೆ ಎಂಬ ಪ್ರತಿಜ್ಞಾವಿಧಿ ಯನ್ನು ಎಲ್ಲರೂ ಸ್ವೀಕರಿಸಿದರು. ಸಚಿವ ಸುನಿಲ್ ಕುಮಾರ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಬೆಂಗಳೂರಿನ ವಿಧಾನಸೌಧದ ಮೆಟ್ಟಿಲು, ಗಾಂಧಿ ಪ್ರತಿಮೆ, ಹೈಕೋರ್ಟ್, ಎಲ್ಲ ಜಿಲ್ಲೆಗಳಲ್ಲಿ ವಿಮಾನ, ರೈಲು, ಬಸ್ ನಿಲ್ದಾಣ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ, ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳಗಳಲ್ಲೂ ಈ ಗಾಯನ ನಡೆಯಿತು.ಈ ಕೋಟಿ ಕಂಠ ಗಾಯನ ಕಾರ್ಯ ಕ್ರಮದಲ್ಲಿ ಕನ್ನಡದ ಕಂಪನ್ನು ಪಸರಿಸಲು ಒಂದು ಕೋಟಿ 15 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದರು.

45 ದೇಶಗಳ 26 ರಾಜ್ಯಗಳ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಇಂದು ತಾವಿರುವೆಡೆಯಲ್ಲೇ ಕನ್ನಡದ ಹಾಡುಗಳನ್ನು ಹಾಡಿದುದು ವಿಶೇಷವಾ ಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಪ್ರಧಾನ ಕಾರ್ಯ ಕ್ರಮದಲ್ಲಿ ಭಾಗಿಯಾಗಿ ಕನ್ನಡದ ಹಾಡುಗಳಿಗೆ ದನಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಸರ್ಕಾರದ ಸಚಿವರುಗಳು ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲೂ ಭಾಗಿಯಾಗಿ ಕನ್ನಡದ ಹಾಡುಗಳನ್ನು ಹಾಡಿ ಸಂತಸಪಟ್ಟರು.

ರಾಜ್ಯೋತ್ಸವದ ಅಂಗವಾಗಿ ಇಂದು ನಡೆದ ಕೋಟಿ ಕಂಠ ಗಾಯನ ಬಾನಯಾನದಲ್ಲೂ ಮೊಳಗಿದ್ದು, ಬೆಂಗಳೂರಿನಿಂದ ಗ್ವಾಲಿಯರ್‍ಗೆ ತೆರಳಿದ ಸ್ಪೈಸ್ ಜೆಟ್ ವಿಮಾನದ ಪೈಲಟ್ ಹಾಗೂ ಪ್ರಯಾಣಿಕರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಎಂದು ಹಾಡನ್ನು ಹಾಡಿದರು.

ವಿಮಾನದ ಪೈಲಟ್ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಕನ್ನಡ ಹಾಡುಗಳ ಕೋಟಿ ಕಂಠ ಗಾಯನವನ್ನು ಆಯೋಜಿಸಿದೆ. ಈ ಅಭಿಯಾನದ ಭಾಗವಾಗಿ ನಾವೆಲ್ಲರೂ ಇಂದು ಕನ್ನಡದ ಹಾಡನ್ನು ಹಾಡೋಣ ಎಂದು ಹೇಳಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳ ಜತೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿ ಎಲ್ಲರೂ ಸಂಭ್ರಮಿಸಿದ ಚಿತ್ರಣ ವೈರಲ್ ಆಯಿತು.

Translate »