ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ  ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ
ಮೈಸೂರು

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ

June 11, 2021

ಮೈಸೂರು, ಜೂ.10- ಪೆಟ್ರೋಲ್, ಡೀಸೆಲ್, ಎಲ್‍ಪಿಜಿ, ಆಹಾರ ಧಾನ್ಯ, ಅಡುಗೆ ಎಣ್ಣೆ, ಸ್ಟೀಲ್, ಸಿಮೆಂಟ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೊರೊನಾ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವಾಗ ಅಚ್ಛೇ ದಿನಗಳು ದೇಶದ ಜನರಿಗೆ ಬರುತ್ತವೆ ಎಂದು ಹೇಳಿದ್ದರು. ಅದು ಈಗ ನಿಜವಾಗಿದೆ. ಪೆಟ್ರೋಲ್ ಶತಕ ಬಾರಿಸಿ, ಮಿಕ್ಕೆಲ್ಲ ಡೀಸೆಲ್, ಎಲ್‍ಪಿಜಿ, ಅಡುಗೆ ಎಣ್ಣೆ, ಆಹಾರ ಧಾನ್ಯಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಜನತೆ ಕಳೆದ ಒಂದು ವರ್ಷದಿಂದ ಕೊರೊನಾ ಮತ್ತು ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಬಹಳ ನೊಂದಿದ್ದಾರೆ. ಜನರ ಕೊಳ್ಳುವ ಶಕ್ತಿಯೇ ಕುಂದಿದೆ. ಲಾಕ್‍ಡೌನ್ ಪರಿಣಾಮ ಶೇ.60 ಜನರು ಕೆಲಸ ಕಳೆದುಕೊಂಡು, ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ, ಕೇಂದ್ರ ಸರ್ಕಾರ ದಿನೇ ದಿನೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಅದರ ಜೊತೆಗೆ ಈಗ ಸರ್ಕಾರ ವಿದ್ಯುತ್ ದರವನ್ನು ಸಹ ಏರಿಕೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು. ಕೇಂದ್ರ ಸರ್ಕಾರ `ಒಂದೇ ದೇಶ-ಒಂದೇ ತೆರಿಗೆ’ ಎಂದು ಹೇಳಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಈ ಕೂಡಲೇ ಜಿ.ಎಸ್.ಟಿ ವ್ಯಾಪ್ತಿಗೆ ಸೇರಿಸಬೇಕೆಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಡಾ. ಮೊಗಣ್ಣಾಚಾರ್, ಕೃಷ್ಣಪ್ಪ, ಗಣೇಶ ಪ್ರಸಾದ್, ಮಂಜುನಾಥ್, ಚಂದ್ರ ಒತ್ತಾಯಿಸಿದ್ದಾರೆ.

Translate »