ಅರಬ್ಬಿತಿಟ್ಟಲ್ಲಿ ಮತ್ತೊಂದು ಸಲಗ ಸೆರೆ
ಮೈಸೂರು

ಅರಬ್ಬಿತಿಟ್ಟಲ್ಲಿ ಮತ್ತೊಂದು ಸಲಗ ಸೆರೆ

January 3, 2023

ಮೈಸೂರು,ಜ.2(ಎಂಟಿವೈ)- ಮೈಸೂರು, ಹುಣಸೂರು, ಕೆ.ಆರ್.ನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭೀತಿ ಹುಟ್ಟಿಸಿ, ಕೊನೆಗೆ ಅರಬ್ಬಿತಿಟ್ಟು ಪ್ರದೇಶ ಹೊಕ್ಕಿದ್ದ ಮತ್ತೊಂದು ಸಲಗನನ್ನು ಸುರಕ್ಷಿತವಾಗಿ ಸೆರೆ ಹಿಡಿದು, ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆ ಅಭಯಾರಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ.
ಹುಣಸೂರು ತಾಲೂಕಿನ ಅರಬ್ಬಿತಿಟ್ಟು ಪ್ರದೇಶ ಸೇರಿ ಸುತ್ತಮುತ್ತಲ ರೈತರು ಹೊಲ ಗಳಲ್ಲಿ ಬೆಳೆದಿದ್ದ ಫಸಲನ್ನು ತಿಂದು, ಹಾಳು ಮಾಡಿ ನಾನಾ ರೀತಿ ಉಪಟಳ ನೀಡು ವುದರೊಂದಿಗೆ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಎರಡು ಗಂಡಾನೆಗಳನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿದು, ಸ್ಥಳಾಂತರ ಮಾಡಿರುವುದ ರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಅರಬ್ಬಿತಿಟ್ಟು ಸೇರಿದ್ದ ಎರಡು ಗಂಡಾನೆಗಳಲ್ಲಿ ಒಂದನ್ನು ಡಿ.31ರಂದು ಸಂಜೆ ಸೆರೆ ಹಿಡಿ ಯಲಾಗಿತ್ತು, ಮತ್ತೊಂದು ಆನೆ ಸೆರೆಗೆ ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿ, ಮಧ್ಯಾಹ್ನದ ವೇಳೆ 30 ವರ್ಷದ ಸಲಗನನ್ನು ಸೆರೆ ಹಿಡಿದು, ಸಂಜೆ ಬಿಡುಗಡೆ ಮಾಡಲಾಯಿತು.

ಕಳೆದ ಒಂದೂವರೆ ತಿಂಗಳ ಹಿಂದೆಯೇ ಅರಣ್ಯ ಪ್ರದೇಶದಿಂದ ಹೊರ ಬಂದಿದ್ದ ಈ ಎರಡು ಗಂಡಾನೆ, ಮೈಸೂರು ತಾಲೂ ಕಿನ ಜಯಪುರ, ಶೀಳನಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ರೈತರ ಬೆಳೆ ಹಾನಿಯುಂಟು ಮಾಡಿದ್ದವು. ಅರಣ್ಯ ಪ್ರದೇಶಕ್ಕೆ ಅಟ್ಟಲು ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಆದರೆ, ಆ ಆನೆಗಳು ಅರಣ್ಯ ಸಿಬ್ಬಂದಿ ಕಣ್ತಪ್ಪಿಸಿ ಹುಣಸೂರು ವಿಭಾಗದ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಹೊಕ್ಕಿದ್ದವು. ಬಳಿಕ ಅಲ್ಲಿಂದ ಕೆ.ಆರ್.ನಗರದ ಸುತ್ತಮುತ್ತ ಕಾಣಿಸಿ ಕೊಂಡಿದ್ದವು. ಆದರೆ, ಮತ್ತೆ ಕೆ.ಆರ್.ನಗರ ದಿಂದ ಅರಬ್ಬಿತಿಟ್ಟು ಪ್ರದೇಶಕ್ಕೆ ವಾಪಸ್ಸಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿತ್ತು. ಒಂದೂವರೆ ತಿಂಗಳಿಂದಲೂ ಮೂರು ತಾಲೂಕುಗಳ 30ಕ್ಕೂ ಹೆಚ್ಚು ಗ್ರಾಮಗಳಿಗೆ ಸೇರಿದ ಜಮೀನುಗಳಲ್ಲಿ ಅಡ್ಡಾಡಿದ್ದರೂ, ಜನರ ಮೇಲೆ ಎಲ್ಲಿಯೂ ದಾಳಿ ನಡೆಸಿರಲಿಲ್ಲ.

ಮುಂಜಾಗ್ರತಾ ಕ್ರಮವಾಗಿ ಎರಡು ಆನೆ ಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡು ವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ಅಂತಿಮವಾಗಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ನಿರ್ಧರಿಸಿ ಡಿ.29ರಂದು ಕೂಂಬಿಂಗ್ ಸ್ಪೆಷಲಿಸ್ಟ್ ಅಭಿ ಮನ್ಯು ನೇತೃತ್ವದಲ್ಲಿ ದಸರಾ ಆನೆಗಳಾದ ಭೀಮಾ, ಮಹೇಂದ್ರ, ಪ್ರಶಾಂತ್ ಹಾಗೂ ಗಣೇಶ ಸಾಕಾನೆಗಳನ್ನು ಅರಬ್ಬಿತಿಟ್ಟು ಅರಣ್ಯಕ್ಕೆ ಕರೆಸಲಾಗಿತ್ತು. ಮರು ದಿನ (ಡಿ.30) ವಕ್ರ ದಂತವುಳ್ಳ ಒಂಟಿ ಸಲಗ ಅನಿರೀಕ್ಷಿತ ದಾಳಿ ನಡೆಸಿ ಮಹಿಳೆಯನ್ನು ಬಲಿ ಪಡೆದ ಹಿನ್ನೆಲೆ ಯಲ್ಲಿ ಪುಂಡಾಟ ಮೆರೆದಿದ್ದ ಒಂಟಿ ಸಲಗನನ್ನು ಸೆರೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿದ್ದರು. ಮರುದಿನ(ಡಿ.31) ಅರಬ್ಬಿತಿಟ್ಟಲಿದ್ದ 30 ವರ್ಷದ ಗಂಡಾನೆ ಯನ್ನು ಸೆರೆ ಹಿಡಿದು, ಸ್ಥಳಾಂತರಿಸಲಾಗಿತ್ತು. ಜ.1ರಂದು ಸಿಬ್ಬಂದಿಗೆ ವಿಶ್ರಾಂತಿ ನೀಡಲಾ ಗಿತ್ತು. ಇಂದು ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿ, ಆನೆ ಪತ್ತೆ ಮಾಡಿ, ಮಧ್ಯಾಹ್ನ 12 ಗಂಟೆಗೆ ಅರವಳಿಕೆ ಮದ್ದನ್ನು ಡಾಟ್ ಮಾಡಿ, ನಿದ್ರಾ ಮಂಪರಿಗೆ ಜಾರಿದ ಬಳಿಕ ಹಗ್ಗ ಬಿಗಿದು, ಸಾಕಾನೆಗಳ ನೆರವಿನಿಂದ ಅರಣ್ಯ ಪ್ರದೇಶದಿಂದ ಹೊರಗೆ ಎಳೆದು ತಂದು ರೇಡಿಯೋ ಕಾಲರ್ ಅಳವಡಿಸಲಾಯಿತು. ಕ್ರೇನ್ ಸಹಾಯದಿಂದ ಲಾರಿಯಲ್ಲಿ ತುಂಬಿ, ಸಾಗಿಸಿ ಸಂಜೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಹುಣಸೂರು ವಿಭಾಗದ ಡಿಸಿಎಫ್ ಹಾಗೂ ಎಲಿಫ್ಯಾಂಟ್ ಟಾಸ್ಕ್‍ಫೋರ್ಸ್ ಇಂಚಾರ್ಜ್ ಪಿ.ಎ.ಸೀಮಾ, ಎಸಿಎಫ್ ಅನುಷಾ, ಆರ್‍ಎಫ್‍ಓ ನಂದ ಕುಮಾರ್, ಪಶು ವೈದ್ಯ ರಾದ ಡಾ.ರಮೇಶ್, ಡಾ.ಮುಜೀಬ್, ಗುರಿ ಕಾರ ಅಕ್ರಮ್ ಹಾಗೂ ಡಿಆರ್‍ಎಫ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »