ನಾಲ್ವರು ಖದೀಮರ ಬಂಧನ: 20 ಲಕ್ಷ ರೂ. ಮೌಲ್ಯದ ಆಭರಣ ವಶ
ಮೈಸೂರು

ನಾಲ್ವರು ಖದೀಮರ ಬಂಧನ: 20 ಲಕ್ಷ ರೂ. ಮೌಲ್ಯದ ಆಭರಣ ವಶ

November 25, 2022

ಮೈಸೂರು, ನ.24(ಎಸ್‍ಬಿಡಿ)- ಮೈಸೂರಿನ ಸಿಸಿಬಿ ಪೊಲೀಸರು, ನಾಲ್ವರು ಖತರ್ನಾಕ್ ಕಳ್ಳರನ್ನು ಬಂಧಿಸಿ, 20.40 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಕ್ಕೆ ಸಿಸಿಬಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ ತಂಡ ನ.21ರಂದು ಓರ್ವ, ನ.16ರಂದು ಇಬ್ಬರು ಹಾಗೂ ಅ.25ರಂದು ಮತ್ತೋರ್ವ ಖದೀಮನನ್ನು ಬಂಧಿಸಿದ್ದು, ಈ ಮೂಲಕ ಹಲವು ಕಳ್ಳತನ ಪ್ರಕರಣಗಳನ್ನು ಬೇಧಿಸಿದೆ.

ಪೊಲೀಸರು ಖಚಿತ ಮಾಹಿತಿ ಮೇರೆಗೆ ನ.21ರಂದು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಮೈಸೂರಿನ ಜಯಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಹಾಗೂ ಹಾಸನ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವುದು ತಿಳಿದುಬಂದಿದೆ. ನಂತರ ಆತನನ್ನು ಬಂಧಿಸಿ, ಕಳವು ಮಾಡಿದ್ದ 2.40 ಲಕ್ಷ ರೂ. ಮೌಲ್ಯದ 38 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಮತ್ತಿಬ್ಬರು ಆರೋಪಿಗಳನ್ನು ನ.16ರಂದು ಬಂಧಿಸಿ, ಅವರಿಂದ 16.50 ಲಕ್ಷ ರೂ. ಮೌಲ್ಯದ 312 ಗ್ರಾಂ ಚಿನ್ನಾಭರಣ, 868 ಗ್ರಾಂ ಬೆಳ್ಳಿಯ ಆಭರಣ, 4 ವಾಚ್ ಹಾಗೂ ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ. ಮೈಸೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳ್ಳತನ, ಸರಗಳ್ಳತನ ಮತ್ತು ಸಾಮಾನ್ಯ ಕಳವು ನಡೆಸಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೋರ್ವ ಆರೋಪಿಯನ್ನು ಕಳೆದ ಅಕ್ಟೋಬರ್ 25ರಂದು ಬಂಧಿಸಿ, ಆತ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ 1.50 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ನಾಲ್ವರು ಖದೀಮರ ಬಂಧನದಿಂದ ವಿದ್ಯಾರಣ್ಯಪುರಂ ಠಾಣೆಯ 2 ಸರಗಳ್ಳತನ, ನಜರ್‍ಬಾದ್, ಕುವೆಂಪುನಗರ, ಉದಯಗಿರಿ ಠಾಣಾ ವ್ಯಾಪ್ತಿಯ ತಲಾ ಒಂದು ಸರಗಳ್ಳತನ, ಸರಸ್ವತಿಪುರಂ, ನಜರ್‍ಬಾದ್, ಆಲನಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಠಾಣಾ ವ್ಯಾಪ್ತಿಯ ತಲಾ ಒಂದು ಕನ್ನ ಕಳವು, ನಜರ್‍ಬಾದ್ ಠಾಣಾ ವ್ಯಾಪ್ತಿಯ ಒಂದು ಮನೆ ಕಳುವು, ನಜರ್‍ಬಾದ್ ಮತ್ತು ವಿಜಯನಗರ ಠಾಣೆಯಲ್ಲಿ ತಲಾ ಒಂದು ಸಾಮಾನ್ಯ ಕಳವು ಪ್ರಕರಣಗಳು ಪತ್ತೆಯಾಗಿವೆ.
ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತ ಪ್ರಸನ್ನ, ಸಿಸಿಬಿ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಹೆಚ್‍ಬಿ ವಿಭಾಗದ ಇನ್ಸ್‍ಪೆಕ್ಟರ್ ಜಿ.ಶೇಖರ್, ಎಎಸ್‍ಐಗಳಾದ ಯು.ಉಮೇಶ್, ಅಸ್ಗರ್ ಖಾನ್, ಸಿಬ್ಬಂದಿ ಸಲೀಂಪಾಷ, ರಾಮಸ್ವಾಮಿ, ಲಕ್ಷ್ಮಿಕಾಂತ, ಪಿ.ಎನ್.ಆನಂದ, ಯಾಕೂಬ್ ಷರೀಪ್, ಉಮಾಮಹೇಶ್, ಗಣೇಶ್, ಶಿವರಾಜು, ಪ್ರಕಾಶ್, ಸುರೇಶ್, ಚಂದ್ರಶೇಖರ, ಗೋವಿಂದ, ಮಧುಸೂದನ, ಮೋಹನಾರಾಧ್ಯ, ಮಹೇಶ್, ಪವನ್, ನರಸಿಂಹರಾಜು, ರಮ್ಯಾ ಹಾಗೂ ಗೌತಮ್ ಕಾರ್ಯಾಚರಣೆ ನಡೆಸಿದ್ದರು.

Translate »