ಪಾಂಡವಪುರದಲ್ಲಿ ಕೆಆರ್‍ಎಸ್ 9 ಕಾರ್ಯಕರ್ತರ ಬಂಧನ
ಮಂಡ್ಯ

ಪಾಂಡವಪುರದಲ್ಲಿ ಕೆಆರ್‍ಎಸ್ 9 ಕಾರ್ಯಕರ್ತರ ಬಂಧನ

January 19, 2022

ಪಾಂಡವಪುರ,ಜ.18-ತಾಲೂಕು ಕಚೇರಿಯಲ್ಲಿ ಭ್ರಷ್ಟಾ ಚಾರ ನಡೆಯುತ್ತಿದೆ ಎಂದು ಕೋವೀಡ್ ನಿಯಮಾವಳಿ ಧಿಕ್ಕರಿಸಿ ದಾಂಧÀಲೆ ನಡೆಸಿದ ಆರೋಪದ ಮೇಲೆ ಕರ್ನಾಟಕ ರಕ್ಷಣಾ ಸಮಿತಿ(ಕೆಆರ್‍ಎಸ್) ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ತಾಲೂಕು ಕಚೇರಿಗೆ ನುಗ್ಗಿದ ಕೆಆರ್‍ಎಸ್ ಪಕ್ಷದ ಕಾರ್ಯಕರ್ತರು ಅಧಿಕಾರಿಗಳನ್ನು ನಿಂದಿಸಿ, ನೂಕಾಟ -ತಳ್ಳಾಟದ ಮೂಲಕ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿ ದರು ಎಂದು ದೂರಲಾಗಿದೆ. ಈ ಸಂಬಂಧ 9 ಮಂದಿ ಕಾರ್ಯಕರ್ತರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಪಕ್ಷದ ಕಾರ್ಯಕರ್ತರಾದ ಲಿಂಗೇಗೌಡ, ವಿಶ್ವನಾಥ್, ಉಮೇಶ್‍ಗೌಡ, ಮಹೇಂದ್ರಕುಮಾರ್, ಪ್ರಕಾಶ್, ರಮೇಶ್ ಗೌಡ, ಯೋಗೇಶ್, ರವಿಕುಮಾರ್ ಹಾಗೂ ಮಂಜು ನಾಥ್ ಬಂಧಿತರು. ಸ್ಥಳೀಯ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಮಂಗಳ ವಾರ(ಜ.11) ಕೆಆರ್‍ಎಸ್ ಕಾರ್ಯಕರ್ತರು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಕುರಿತು ತಹಸೀ ಲ್ದಾರ್ ಪ್ರಮೋದ್ ಎಲ್.ಪಾಟೀಲ್, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಕುಪಿತರಾದ ಕೆಆರ್‍ಎಸ್ ಕಾರ್ಯಕರ್ತರು ಇಂದು(ಜ.18) ತಾಲೂಕು ಕಚೇರಿಗೆ ಬಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ತಹಸೀಲ್ದಾರ್ ಪ್ರಮೋದ್ ಪಾಟೀಲ್ ಅವರ ಛೇಂಬರ್‍ಗೆ ನುಗ್ಗಿ ಏರುದನಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಮುಂದಾದರು ಎನ್ನಲಾಗಿದೆ. ಈ ವೇಳೆ ಅಧಿಕಾರಿ ಗಳು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಎಲ್ಲರನ್ನೂ ಸಮಾಧಾನಪಡಿಸಿದ್ದಾರೆ.

ಈ ವೇಳೆ ಕಾರ್ಯಕರ್ತರು ಘಟನೆಯನ್ನು ಫೇಸ್‍ಬುಕ್ ನಲ್ಲಿ ಲೈವ್ ಮಾಡುವುದಾಗಿ ಹೇಳಿ ಮೊಬೈಲ್ ಮೂಲಕ ಚಿತ್ರೀಕರಿಸಲು ಮುಂದಾದರು. ಇದಕ್ಕೆ ಎಸಿ ಶಿವಾನಂದ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿ, ಕಚೇರಿಯ ಒಳಗೆ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರಲ್ಲದೆ, ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಬೇಡಿ. ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ ಎಂದು ಸೂಚಿಸಿದರು. ಆದರೆ ಎಸಿ, ತಹಸೀಲ್ದಾರ್ ಮಾತನ್ನು ಲೆಕ್ಕಿಸದೆ ದಾಂಧಲೆಗೆ ಮುಂದಾದರು ಎನ್ನಲಾಗಿದೆ.

ಈ ವೇಳೆ ಅಧಿಕಾರಿಗಳು-ಕಾರ್ಯಕರ್ತರ ತಳ್ಳಾಟ-ನೂಕಾಟ ನಡೆದು ಪರಿಸ್ಥಿತಿ ಕೈ-ಕೈ ಮಿಲಾಯಿಸುವ ಹಂತ ತಲುಪಿತು. ವಿಷಯ ತಿಳಿದು ತಕ್ಷಣ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಪ್ರಭಾಕರ್, ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಎಸಿ ಮತ್ತು ತಹಸೀಲ್ದಾರ್ ಸೂಚನೆ ಮೇರೆಗೆ ಪಕ್ಷದ 9 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಘಟನೆ ಸಂಬಂಧ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಕೆಆರ್‍ಎಸ್ ಕಾರ್ಯಕರ್ತರು ಕೋವಿಡ್-19 ನಿಯಮ ಉಲ್ಲಂಘಿಸಿ ಪ್ರತಿಭಟಿಸಿದ್ದಲ್ಲದೆ, ತಾಲೂಕು ಕಚೇರಿಗೆ ನುಗ್ಗಿ ತಮಗಲ್ಲದೆ ಇನ್ನಿತರೆ ಅಧಿಕಾರಿಗಳು, ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾದರು. ಅಲ್ಲದೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ದಾಖಲಿಸಿದರು. ತಹಸೀಲ್ದಾರ್ ದೂರಿನ ಮೇಲೆ ಪಾಂಡವಪುರ ಠಾಣೆ ಪೊಲೀಸರು 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »