ಆದಿಶಂಕರಾಚಾರ್ಯರ ಪ್ರತಿಮೆ ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್‍ಗೆ ಸನ್ಮಾನ
ಮೈಸೂರು

ಆದಿಶಂಕರಾಚಾರ್ಯರ ಪ್ರತಿಮೆ ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್‍ಗೆ ಸನ್ಮಾನ

November 7, 2021

ಮೈಸೂರು,ನ.6(ಆರ್‍ಕೆ)-ಶುಕ್ರವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥದಲ್ಲಿ ಅನಾವರಣಗೊಳಿಸಿದ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆ ರೂಪಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನಿವಾಸದಲ್ಲಿ ಆತ್ಮೀಯವಾಗಿ ಅಭಿನಂದಿಸಿದರು.

ಪ್ರತಿಮೆ ಕೆತ್ತನೆ ಕೆಲಸದಲ್ಲಿ ನಿರತರಾಗಿದ್ದ ತಂಡದ ಶ್ರಮ, ತಾಳ್ಮೆಯನ್ನು ಶ್ಲಾಘಿಸಿದ ಸಚಿವರು, ಶಿಲ್ಪಕಲೆಯಲ್ಲಿ ಮತ್ತಷ್ಟು ಸಾಧನೆಗೈದು ಮೈಸೂರಿಗಷ್ಟೇ ಅದಲ್ಲದೇ ರಾಜ್ಯಕ್ಕೆ ಗೌರವ ತರುವಂತಾಗಲಿ ಎಂದು ಹಾರೈಸಿದರು. ಆದಿಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವುದು ಮೈಸೂರಿಗೆ ಹೆಮ್ಮೆ ತರುವಂತಹ ವಿಚಾರ ಎಂದು ಅವರು ಇದೇ ವೇಳೆ ನುಡಿದರು.

ಚಾಮುಂಡಿಬೆಟ್ಟದಲ್ಲಿ ಭೂಮಿ ಕುಸಿದಿರುವ ಬಗ್ಗೆ ಮುಖ್ಯಮಂತ್ರಿಗಳು, ಲೋಕೋಪ ಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ಗಮನಕ್ಕೆ ತಂದಿದ್ದೇವೆ. ಈಗಾಗಲೇ ಅಧಿಕಾರಿಗಳು ಪರಿಹಾರ ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅಗತ್ಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಮು, ನಗರಾಧ್ಯಕ್ಷ ಶ್ರೀವತ್ಸ, ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಇತರರು ಉಪಸ್ಥಿತರಿದ್ದರು.

Translate »