ಮೈಸೂರು, ಚಾ.ನಗರ, ನೀಲಗಿರಿಯಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ
ಮೈಸೂರು

ಮೈಸೂರು, ಚಾ.ನಗರ, ನೀಲಗಿರಿಯಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ

December 16, 2021

ಮೈಸೂರು, ಡಿ.15(ಎಂಟಿವೈ)-ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆಯಿಲ್ಲವೆಂಬಂತೆ ನಡೆದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಭಾಗದ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಲ್ಪಟ್ಟ ಡಾ. ಕೆ.ಮಹ ದೇವ್ ಪರಾಭವಗೊಂಡಿದ್ದಾರೆ.

ಕಳೆದ 2 ಬಾರಿ ಸತತವಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವಿನ ಜೊತೆಗೆ ಸಂಘದ ರಾಜ್ಯಾಧ್ಯಕ್ಷರಾಗುವ ಬಯಕೆ ಹೊಂದಿದ್ದ ಡಾ. ಕೆ.ಮಹದೇವ್ ಅವರನ್ನು ಪರಾಭವಗೊಳಿಸುವ ಮೂಲಕ ಮತದಾರರು ಶಾಕ್ ನೀಡಿದ್ದಾರೆ. ವಿಶೇಷವೆಂದರೆ ಡಾ. ಕೆ.ಮಹ ದೇವ್ ಅವರ ತಂಡದಲ್ಲಿದ್ದ ಕೆ.ವಿ.ಶ್ರೀಧರ್ ಅತ್ಯಧಿಕ ಮತಗಳೊಂದಿಗೆ ಜಯ ಗಳಿಸಿದರೆ, ಡಾ. ಎಂ.ಬಿ. ಮಂಜೇಗೌಡ ಮೂರನೇ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಡಾ. ಕೆ.ಮಹದೇವ್ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಮೈಸೂರು ಭಾಗದ ಮೂರು ಸ್ಥಾನಗಳಿಗೆ ಡಾ. ಕೆ.ಮಹದೇವ್, ಕೆ.ವಿ.ಶ್ರೀಧರ್, ಡಾ.ಎಂ.ಬಿ. ಮಂಜೇಗೌಡ, ಸಿ.ಜಿ.ಗಂಗಾಧರ್, ಸಿ.ಜೆ. ಪಾಲಾಕ್ಷ, ರಾಜು, ಡಿ.ಹೆಚ್. ಸತೀಶ್‍ಕುಮಾರ್, ಬಿ.ಆರ್. ಸುಮಿತ್ರಾ, ಸುಶೀಲಾ ನಂಜಪ್ಪ ಸೇರಿದಂತೆ 9 ಮಂದಿ ಸ್ಪರ್ಧಿಸಿದ್ದರು. ಇವರಲ್ಲಿ ಕೆ.ವಿ. ಶ್ರೀಧರ್, ಸಿ.ಜಿ.ಗಂಗಾಧರ್ ಮತ್ತು ಡಾ.ಎಂ.ಬಿ. ಮಂಜೇ ಗೌಡ ಜಯಶೀಲರಾಗಿದ್ದಾರೆ. ಮೈಸೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಕೆ.ವಿ. ಶ್ರೀಧರ್ ಮತ್ತು ಸಿ.ಜಿ. ಗಂಗಾಧರ್ ಮುನ್ನಡೆ ಕಾಯ್ದುಕೊಂಡು ಬಂದರು.

ಮೂರನೇ ಸ್ಥಾನಕ್ಕಾಗಿ ಡಾ. ಎಂ.ಬಿ. ಮಂಜೇಗೌಡ ಮತ್ತು ಬೀಡನಹಳ್ಳಿ ಸತೀಶ್‍ಗೌಡ ನಡುವೆ ಹಾವು-ಏಣಿ ಆಟ ನಡೆಯುತ್ತಿತ್ತು. ಅಂತಿಮವಾಗಿ ಮಂಜೇಗೌಡರು 8790 ಮತ ಪಡೆದು ಮೂರನೇ ಸ್ಥಾನ ಗಿಟ್ಟಿಸಿಕೊಂಡರೆ, ಸತೀಶ್‍ಗೌಡ 7852 ಮತಗಳೊಂದಿಗೆ ಸ್ಪರ್ಧೆಯಿಂದ ನಿರ್ಗಮಿಸಿದರು.
ಮೈಸೂರು ಭಾಗದಲ್ಲಿ 25 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಮೈಸೂರು ನಗರ ವ್ಯಾಪ್ತಿಯೊಂದರಲ್ಲೇ 13 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಶೇ.70ರಷ್ಟು ಮತದಾನ ನಡೆದಿತ್ತು. ಡಾ. ಕೆ.ಮಹದೇವ್ ನೇತೃತ್ವದಲ್ಲಿ ಕೆ.ವಿ. ಶ್ರೀಧರ್ ಮತ್ತು ಮಂಜೇಗೌಡ ಒಂದು ಬಣವಾಗಿ ಸ್ಪರ್ಧಿಸಿದ್ದರೆ, ಉಳಿದವರೆಲ್ಲರೂ ಯಾವುದೇ ಬಣವಿಲ್ಲದೆ ಏಕಾಂಗಿಯಾಗಿ ಸೆಣಸಾಟ ನಡೆಸಿದರು.

ಮತ ಎಣಿಕೆ ಕೇಂದ್ರವಾದ ಒಕ್ಕಲಿಗರ ಸಮುದಾಯ ಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೆ.ಆರ್. ಉಪವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಕೆ.ಆರ್ ಮತ್ತು ವಿದ್ಯಾರಣ್ಯಪುರಂ ಠಾಣೆಗಳ ಸಿಬ್ಬಂದಿಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು. ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿಜೇತರಾದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಎಣಿಕಾ ಕೇಂದ್ರದಿಂದ ಹೊರಬಂದ ವಿಜೇತರನ್ನು ಅಭಿಮಾನಿಗಳು ಹೆಗಲ ಮೇಲೆ ಕೂರಿಸಿಕೊಂಡು, ಜೈಕಾರ ಹಾಕುತ್ತಾ ಹರ್ಷವ್ಯಕ್ತಪಡಿಸಿದರು.

Translate »