ಸಂಕಷ್ಟಕ್ಕೀಡಾಗಿರುವವರಿಗೆ  ಕೂಡಲೇ ಪರಿಹಾರ ಕಲ್ಪಿಸಿ
News

ಸಂಕಷ್ಟಕ್ಕೀಡಾಗಿರುವವರಿಗೆ ಕೂಡಲೇ ಪರಿಹಾರ ಕಲ್ಪಿಸಿ

December 16, 2021

ಬೆಂಗಳೂರು, ಡಿ. 15(ಕೆಎಂಶಿ)- ತಾತ್ಕಾಲಿಕವಾಗಿ ಅಭಿವೃದ್ಧಿ ಕೆಲಸ ನಿಲ್ಲಿಸಿ, ಅತಿವೃಷ್ಟಿಗೆ ಸಿಲುಕಿ ನಲು ಗಿರುವ ರೈತನಿಗೆ ನೆರವಾಗಿ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿ ಯೂರಪ್ಪ ವಿಧಾನಸಭೆ ಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇತಿಹಾಸದ ಪುಟದಲ್ಲೇ ರಾಜ್ಯದಲ್ಲಿ ಅಕಾಲಿಕ ಮಳೆ ಬಿದ್ದು, ಕೊಯ್ಲಿಗೆ ಬಂದ ಬೆಳೆ ಕಳೆದುಕೊಂಡು ರೈತ ಬೀದಿಗೆ ಬಿದ್ದಿದ್ದಾನೆ. ಇವನ ಕಣ್ಣೊರೆಸಿ, ಹಸಿವನ್ನು ನೀಗಿಸಲು ಮೊದಲ ಆದ್ಯತೆ ಕೊಡಿ. ನಿಮ್ಮ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಬದಿಗಿಡಿ ಎಂದು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಸಲಹೆ ಮಾಡಿದರು. ಅತಿವೃಷ್ಟಿ, ಅನಾವೃಷ್ಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಂದರ್ಭದಲ್ಲಿ ಏಕಾಏಕಿ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ಅಕಾಲಿಕ ಮಳೆಯಿಂದ ರೈತನ ಬದುಕನ್ನು ಅಲ್ಪ ಸಮಯದಲ್ಲೇ ಎಳೆ ಎಳೆಯಾಗಿ ಬಿಡಿಸಿಟ್ಟರು. ಕೇಂದ್ರದ ನೆರವಿಗೆ ಕಾಯಬೇಡಿ, ಮೊದಲು ಖಜಾನೆಯಲ್ಲಿರುವ ಹಣವನ್ನು ಪರಿಹಾರವಾಗಿ ನೀಡಿ, ಅವರನ್ನು ಬದುಕಿಸುವ ಕೆಲಸ ಮಾಡಿ. ಕೇಂದ್ರದಿಂದ ಹಣ ಬಂದೇ ಬರುತ್ತದೆ. ಅಲ್ಲಿಂದ ಬರುವವರೆಗೂ ನೀವು ಕಾಯುತ್ತಾ ಕೂರಬೇಡಿ. ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನೆ ಲ್ಲವನ್ನು ತಾತ್ಕಾಲಿಕವಾಗಿ ಮುಂದೂಡಿ. ನಿಮ್ಮಲ್ಲಿರುವ ಹಣವನ್ನು ಪರಿಹಾರಕ್ಕೆ ಬಳಸಿಕೊಳ್ಳಿ. ನೀವು ನೆರವಿಗೆ ಬರದಿದ್ದರೆ, ರೈತ ಬೀದಿಪಾಲಾಗುತ್ತಾನೆ. ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಬೆಳೆ ಹೊಲದಲ್ಲೇ ಕೊಳೆತಿದೆ.

ಇಲ್ಲವೆ ಮೊಳಕೆ ಹೊಡೆದಿದೆ. ಅವನ ಕರುಣಾಜನಕ ಸ್ಥಿತಿ ನೋಡಲಾಗದು. ಮೀನಾಮೇಷ ಎಣಿಸಬೇಡಿ, ಅತಿವೃಷ್ಟಿಗೆ ಸಿಲುಕಿರುವವರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.

ರೈತ, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಅವರಿಗೆ ರೋಜ್‍ಗಾರ್ ಯೋಜನೆಯಡಿ, ಹೆಚ್ಚಿನ ಕೆಲಸ ಕೊಡಿ. ಅವರು ಮಾಡಿರುವ ಕೆಲಸದ ಬಾಕಿಯನ್ನು ತಕ್ಷಣವೇ ಬಿಡುಗಡೆ ಮಾಡಿ. ಮಾಡಿರುವ ಕೆಲಸಕ್ಕೆ ಕೂಲಿ ಕೊಡದಿದ್ದರೆ, ಅವನು ಎಲ್ಲಿ ಹೊಟ್ಟೆ ತುಂಬಿಕೊಳ್ಳುತ್ತಾನೆ. ಇದು ಸಾಮಾನ್ಯ ಜ್ಞಾನ. ಅರ್ಥ ಮಾಡಿಕೊಂಡು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ಯಡಿಯೂರಪ್ಪ ಅವರ ಮಾತಿಗೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಬೆಂಬಲವಾಗಿ ನಿಂತ ಜೆಡಿಎಸ್‍ನ ಶಿವಲಿಂಗೇಗೌಡ ಸತತವಾಗಿ 90 ದಿನಗಳ ಕಾಲ ಅಕಾಲಿಕ ಮಳೆ ಬಿದ್ದಿದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವಧಿಯಲ್ಲಿ 200 ರಿಂದ 400 ಮಿಲಿ ಮೀಟರ್ ಮಳೆ ಬಿದ್ದು, ಕೊಯ್ಲಿಗೆ ಬಂದ ಬೆಳೆ ರೈತನ ಕೈ ಸೇರದೆ ಆಕಾಶ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‍ಡಿಆರ್‍ಎಫ್ ಅಡಿ ಪ್ರತಿ ಹೆಕ್ಟೇರ್‍ಗೆ 6500 ರೂ. ನೀಡುತ್ತೀರಿ. ಅದು ಏನಕ್ಕೂ ಸಾಲದು. ರಾಗಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 35 ಸಾವಿರ ರೂ. ವೆಚ್ಚವಾಗುತ್ತದೆ. ಎನ್‍ಡಿಆರ್‍ಎಫ್ ನಿಯಮವನ್ನು ಬದಿಗಿಟ್ಟು, ಹೆಚ್ಚು ಪರಿಹಾರ ನೀಡಿ, ಇನ್ನು ಮುಂದೆ ಬೆಳೆ ವಿಮೆಯನ್ನು ಕಡ್ಡಾಯ ಮಾಡಿ, ಇಲ್ಲದಿದ್ದರೆ ಸರ್ಕಾರವೇ ವಿಮೆ ಕಟ್ಟಿ ಎಂದು ಒತ್ತಾಯಿಸಿದರು.

Translate »