ಜಗವಿರುವವರೆಗೂ ವಾಲ್ಮೀಕಿ, ರಾಮಾಯಣ ಚಿರಸ್ಥಾಯಿ
ಮೈಸೂರು

ಜಗವಿರುವವರೆಗೂ ವಾಲ್ಮೀಕಿ, ರಾಮಾಯಣ ಚಿರಸ್ಥಾಯಿ

October 10, 2022

ಮೈಸೂರು,ಅ.9(ಆರ್‍ಕೆಬಿ)- ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾ ಕಾವ್ಯವೆಂದೇ ಖ್ಯಾತಿ ಪಡೆದಿರುವ ಮೊದಲ ಸಂಸ್ಕೃತ ಕಾವ್ಯವನ್ನು (ಆದಿಕಾವ್ಯ) ರಚಿಸಿ ದವರು. ವಾಲ್ಮೀಕಿ ಶ್ರೀರಾಮನ ಕಥೆ ಯನ್ನು ಹೇಳುವ ರಾಮಾಯಣವನ್ನು ಬರೆದ ಮಹಾನ್ ಋಷಿ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದ್ದಾರೆ.

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ನಗರ ಮತ್ತು ತಾಲೂಕು ನಾಯಕ ಜನಾಂಗಗಳ ಸಂಘ ಗಳ ಆಶ್ರಯದಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಜಗತ್ತು ಇರುವವರೆಗೂ ರಾಮಾಯಣ ಬದುಕುತ್ತದೆ ಎಂದ ಅವರು, ಮಹರ್ಷಿ ವಾಲ್ಮೀಕಿ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ರುವ ಅಮರ ಋಷಿ ಎಂದು ಹೇಳಿದರು.

ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರ ಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಇತರ ಎಲ್ಲ ಧರ್ಮ ಗುರುಗಳನ್ನು ಶ್ಲಾಘಿಸಿದ ಅವರು, ವಾಲ್ಮೀಕಿ ಯವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತ ವಾಗಿ ಓದಿದರು. ಅಧ್ಯಕ್ಷತೆ ವಹಿಸಿದ್ದ ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಎಸ್ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹಾಗೂ ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಏರಿಸಿರುವ ಮುಖ್ಯಮಂತ್ರಿ ಗಳಿಗೆ ಕೃತಜ್ಞತೆ ಸಲ್ಲಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ ಕಾರದಲ್ಲಿದ್ದಾಗ ನಾಯಕ ಸಮುದಾಯದ ಮೊದಲ ಮೇಯರ್ ಮೈಸೂರಿಗೆ ಸಿಕ್ಕಿದೆ ಎಂದು ಹೇಳಿದ ನಾಗೇಂದ್ರ, ಬುಡಕಟ್ಟು ಸಮುದಾಯದ ಮಹಿಳೆಯನ್ನು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿಯೂ ಬಿಜೆಪಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಸುಮಾರು 1,300 ವರ್ಷಗಳ ಹಿಂದೆ ಚೆನ್ನೈ ಬಳಿ ನಿರ್ಮಿಸಲಾದ ಚೆನ್ನೈ ವಾಲ್ಮೀಕಿ ದೇವಾಲಯವು ಅದ್ಭುತ ವಾಸ್ತುಶಿಲ್ಪದ ಭಾಗವಾಗಿದ್ದು, ಅದನ್ನು ಮೈಸೂರು ಜನರು ದೇವಾಲಯಕ್ಕೆ ನೀಡುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ (2021-22) ಪೂರ್ಣ ಅಂಕ (625/625) ಗಳಿಸಿದ ನಾಯಕ ಸಮುದಾಯದ ವಿದ್ಯಾರ್ಥಿನಿ ಚಾರುಕೀರ್ತಿಗೆ 1 ಲಕ್ಷ ರೂ. ಚೆಕ್ ವಿತರಿಸಲಾಯಿತು. ಇದಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗಾಯಕ ರವಿರಾಜ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಹುಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಡಾ.ಹರದನಹಳ್ಳಿ ನಂಜುಂಡ ಸ್ವಾಮಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಡಿಸಿ ಡಾ.ಬಗಾದಿ ಗೌತಮ್, ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ, ವಸ್ತು ಪ್ರದರ್ಸನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಉಪಸ್ಥಿತರಿದ್ದರು. ಎಸ್ಸಿ/ಎಸ್ಟಿ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪ್ರಭಾ ಸ್ವಾಗತಿಸಿದರು.

Translate »