ವಿಧಾನಸಭಾ ಅಧ್ಯಕ್ಷರಾಗಿ ಯು.ಟಿ.ಖಾದರ್ ಅವಿರೋಧ ಆಯ್ಕೆ
News

ವಿಧಾನಸಭಾ ಅಧ್ಯಕ್ಷರಾಗಿ ಯು.ಟಿ.ಖಾದರ್ ಅವಿರೋಧ ಆಯ್ಕೆ

May 25, 2023

ಬೆಂಗಳೂರು, ಮೇ 24(ಕೆಎಂಶಿ)-ವಿಧಾನಸಭೆಯ ನೂತನ ಸಭಾಧ್ಯಕ್ಷ ರಾಗಿ ಯು.ಟಿ.ಖಾದರ್ ಫರೀದ್ ಅವಿ ರೋಧವಾಗಿ ಆಯ್ಕೆಗೊಂಡರು.
ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಸಭಾಧ್ಯಕ್ಷರ ಚುನಾ ವಣೆ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಾಗ ಸಭಾನಾಯಕ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಯು.ಟಿ.ಖಾದರ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾ ಯಿಸಬೇಕೆಂದು ಸೂಚಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರ ಪ್ರಸ್ತಾಪವನ್ನು ಅನುಮೋದಿಸಿದರು.

ಬಳಿಕ ಸಭಾಧ್ಯಕ್ಷರು ಮಾತನಾಡಿ, ಮುಖ್ಯಮಂತ್ರಿ ಸೂಚಿಸಿರುವ ಹಾಗೂ ಉಪಮುಖ್ಯ ಮಂತ್ರಿ ಅನುಮೋದಿಸಿರುವ ಚುನಾವಣೆ ಪ್ರಸ್ತಾವವನ್ನು ಮತಕ್ಕೆ ಹಾಕುವುದಾಗಿ ಹೇಳಿದರು. ಆಗ ಸದನದಲ್ಲಿ ಧ್ವನಿ ಮತದ ಮೂಲಕ ಸರ್ವಾನುಮತದಿಂದ ಖಾದರ್ ಸಭಾಧ್ಯಕ್ಷರಾಗಿ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಸದಸ್ಯರು ಮೇಜು ಕುಟ್ಟಿ ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವಾನುಮತದಿಂದ ಆಯ್ಕೆಯಾದ ಖಾದರ್ ಅವರನ್ನು ಸಂಪ್ರದಾಯದಂತೆ ಸಭಾಧ್ಯಕ್ಷರ ಪೀಠದವರೆಗೂ ಕರೆತಂದರು. ಆಗ ದೇಶಪಾಂಡೆ ಅವರು ನೂತನ ಸಭಾಧ್ಯಕ್ಷರಿಗೆ ಪೀಠವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು.

ಸಭಾಧ್ಯಕ್ಷರಾದ ಮೇಲೆ ಮಾತನಾಡಿದ ಖಾದರ್, ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸದನದ ಎಲ್ಲರಿಗೂ ಅಭಿನಂದನೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಅನುಷ್ಠಾನ ಮಾಡಿದವರು ಮೈಸೂರು ಮಹಾರಾಜರು. ನನಗೆ ಈ ಸ್ಥಾನ ಸಿಕ್ಕಿರುವುದು ನನ್ನ ಸೌಭಾಗ್ಯ. ಸದಸ್ಯರೆಲ್ಲರ ಸಹಕಾರದಿಂದ ಸದನದ ಘನತೆ ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ. ಪಕ್ಷ ಬೇಧ ಮರೆತು ಎಲ್ಲಾ ಶಾಸಕರನ್ನು ಸಮಾನವಾಗಿ ಕಾಣಲಾಗುವುದು. ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಬಲಿಷ್ಠ ಕರ್ನಾಟಕ ನಿರ್ಮಾಣ ಮಾಡೋಣ ಎಂದರು.

ಮುಖ್ಯಮಂತ್ರಿ ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕ ವಿಧಾನಸಭೆಗೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನಿಮ್ಮನ್ನು ಸದನದ ಎಲ್ಲ ಸದಸ್ಯರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಹೇಳಿದರು.

ನಿಮ್ಮ ತಂದೆಯವರಾದ ಯು.ಟಿ.ಫರೀದ್ ಅವರು ಶಾಸಕರಾಗಿದ್ದರು. ನೀವು ಕೂಡ ಉಲ್ಲಾಳ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದು, ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದೀರಿ. ಅತೀ ಹೆಚ್ಚು ಪ್ರಶ್ನೆ ಕೇಳಿ ಸದನವೀರ ಪ್ರಶಸ್ತಿಯನ್ನು ಗಳಿಸಿದ್ದೀರಿ. ಮಾದರಿ ಶಾಸಕರಾಗಿದ್ದೀರಿ. ಕೊಟ್ಟ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದೀರಿ ಎಂದು ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿದರು. ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ರಾಜ್ಯದ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕು. 7 ಕೋಟಿ ಕನ್ನಡಿಗರ ಸಮಸ್ಯೆ ಚರ್ಚೆಯಾಗಬೇಕು. ರಾಜ್ಯದ ಹಿತ, ಅಭಿವೃದ್ಧಿ ನಮಗೆ ಮುಖ್ಯ ಎಂದು ಹೇಳಿದರು.

ನಿಮ್ಮ ತಕ್ಕಡಿ ಸಮವಾಗಿರಲಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಕರ್ನಾಟಕದ ವಿಧಾನ ಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಇಪ್ಪತ್ತು ವರ್ಷದ ಅನುಭವ ಇದೆ. ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡಿದ್ದೀರಿ ಎಂದರು. ವಿರೋಧ ಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ. ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ತಕ್ಕಡಿ ಸಮವಾಗಿರಬೇಕು. ಸಂವಿಧಾನದಲ್ಲಿ ವಿಶೇಷ ಸ್ಥಾನ ಸಭಾಪತಿಗಳಿಗೆ ಇದೆ. ಸರ್ಕಾರದ ಅಳಿವು ಉಳಿವಿನ ತೀರ್ಮಾನ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದು ಇದೆ. ತಾವು ನೀಡುವ ತೀರ್ಪು ಲ್ಯಾಂಡ್ ಮಾರ್ಕ್ ಆಗುತ್ತದೆ. ನೀವು ನಿಷ್ಪಕ್ಷಪಾತವಾಗಿ ಕೆಲಸ ಮಾಡಿ. ಪ್ರತಿಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚಿದ್ದಾರೆ. ಆಡಳಿತ ಪಕ್ಷದಲ್ಲಿ ನಿಮ್ಮ ನಿಕಟ ಪೂರ್ವ ಪಕ್ಷದ ಆತ್ಮೀಯರು ಇದ್ದಾರೆ. ಇಬ್ಬರನ್ನೂ ಸಮನಾಗಿ ನೋಡಿ ಎಂದು ಸಲಹೆ ನೀಡಿದರು.

ಇತಿಹಾಸ ಸೇರಿದ್ದೀರಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯದ ವಿಧಾನಸಭೆಯ ಇತಿಹಾಸಕ್ಕೆ ನೀವು ಸೇರಿದ್ದೀರಿ. ನಾನು ನಿಮ್ಮ ತಂದೆ ಜತೆ ಶಾಸಕನಾಗಿ ಕೆಲಸ ಮಾಡಿದ್ದೆ. ನಿಮ್ಮನ್ನು ಸೇವಾದಳದ ಕಾರ್ಯಕರ್ತನಾಗಿ, ವಿದ್ಯಾರ್ಥಿ ಘಟಕದ ಕಾರ್ಯಕರ್ತನಾಗಿ, ಶಾಸಕನಾಗಿ, ಮಂತ್ರಿಯಾಗಿ ನೋಡಿದ್ದೇನೆ. ಇಂದು ನಿಮ್ಮನ್ನು ಸ್ಪೀಕರ್ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆ ಸ್ಥಾನ ಬಹಳ ಶ್ರೇಷ್ಠವಾದುದು. ನಾವು ಮಾಜಿ ಸ್ಪೀಕರ್ ವೈಕುಂಠ ಬಾಳಿಗಾ ಅವರ ಇತಿಹಾಸ ಕೇಳಿದ್ದೇವೆ. ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್, ರಮೇಶ್ ಕುಮಾರ್ ಅವರು ಈ ಸ್ಥಾನದಲ್ಲಿ ಕೂತಿದ್ದರು. ಇವರೆಲ್ಲರೂ ಆಡಳಿತ ಅಥವಾ ವಿರೋಧ ಪಕ್ಷದ ಯುವ ಸದಸ್ಯರನ್ನು ಎಬ್ಬಿಸಿ ಮಾತನಾಡಲು ಹೇಳುತ್ತಿದ್ದರು. ನೀವು ಸ್ನೇಹಜೀವಿ, ಮಾನವೀಯತೆಯ ಪ್ರತೀಕ. ಕೋಮುಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ. ಖಾದರ್ ಫರೀದ್ ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಎಲ್ಲಾ ಸಮಾಜದ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೀರಿ. ಹಿಜಾಬ್, ಹಲಾಲ್ ಗಲಾಟೆ ಸಮಯದಲ್ಲೂ ನಿಮ್ಮ ನಿಲುವು ದೇಶದ ಹಿತಾಸಕ್ತಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಬದ್ಧವಾಗಿತ್ತು.

ನೀವು ಎಲ್ಲರನ್ನು ವಿಶಾಲ ಹೃದಯದಿಂದ ನೋಡಿದ್ದೀರಿ, ನೀವು ನ್ಯಾಯಾಧೀಶರ ಸ್ಥಾನದಲ್ಲಿ ಕೂತಿದ್ದು, ನ್ಯಾಯಪೀಠದಿಂದ ಅನ್ಯಾಯ ಆಗಬಾರದು ಎಂಬ ಮಾತಿನಂತೆ, ತಾವು ಈ ಸ್ಥಾನದಲ್ಲಿ ಕೂತು ಎಲ್ಲರಿಗೂ ನ್ಯಾಯ ಒದಗಿಸಿ. ನಮ್ಮ ತಪ್ಪುಗಳನ್ನು ನೀವು ಸರಿಪಡಿಸಿ. ಕೆಲವರು ಉತ್ಸಾಹದಿಂದ ಅಥವಾ ಆಕ್ರೋಶದಿಂದ ಎಲ್ಲೆ ಮೀರಿ ಮಾತನಾಡಲು ಮುಂದಾಗುತ್ತಾರೆ ಅಂತಹವರನ್ನು ನಿಯಂತ್ರಣ ಮಾಡಿ ಎಂಬ ಸಲಹೆ ಮಾಡಿದರು. ಪಕ್ಷ ಬೇಧ ಮರೆತು ಹಲವು ಸದಸ್ಯರು ಸಭಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಬಳಿಕ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.

Translate »