ಮಾಜಿ ಸಚಿವ ಡಾ.ಅಶ್ವತ್ಥ್‍ನಾರಾಯಣ ವಿರುದ್ಧ ಮೈಸೂರಲ್ಲಿ ಎಫ್‍ಐಆರ್ ದಾಖಲು
ಮೈಸೂರು

ಮಾಜಿ ಸಚಿವ ಡಾ.ಅಶ್ವತ್ಥ್‍ನಾರಾಯಣ ವಿರುದ್ಧ ಮೈಸೂರಲ್ಲಿ ಎಫ್‍ಐಆರ್ ದಾಖಲು

May 25, 2023

ಮೈಸೂರು, ಮೇ 24(ಎಸ್‍ಪಿಎನ್)- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಲೆ ಬೆದರಿಕೆ ಮತ್ತು ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪ ಮೇರೆಗೆ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ಮೈಸೂರಿನ ದೇವ ರಾಜ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಡಿಸಿಸಿ ಕಾನೂನು ಘಟಕದ ಅಧ್ಯಕ್ಷ, ವಕೀಲ ತಿಮ್ಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ದೇವರಾಜ ಠಾಣೆಗೆ ತೆರಳಿ ಅಶ್ವತ್ ನಾರಾಯಣ್ ವಿರುದ್ಧ ದೂರು ಸಲ್ಲಿಸಿತು. ಕಳೆದ ಫೆ.15ರಂದು ಮಂಡ್ಯದ ಸಾತನೂರಿ ನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತ ನಾಡಿದ ಅಂದಿನ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು, ಟಿಪ್ಪು ಸುಲ್ತಾನನನ್ನು ಮಂಡ್ಯದ ಉರೀಗೌಡ ಮತ್ತು ನಂಜೇಗೌಡ ಕೊಂದು ಹಾಕಿ ದ್ದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಬಹಿರಂಗವಾಗಿ ಸಾರ್ವಜನಿಕರನ್ನು ಪ್ರಚೋದಿಸಿದ್ದಾರೆ ಎಂದು ಎಂ.ಲಕ್ಷ್ಮಣ್ ನೀಡಿರುವ ದೂರಿನಲ್ಲಿ ತಿಳಿಸಿರುವುದಲ್ಲದೆ, ಈ ಸಂಬಂಧ ಫೆ.17ರಂದೇ ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದರೂ ದೇವರಾಜ ಠಾಣೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಡಾ.ಅಶ್ವತ್ಥ್ ನಾರಾಯಣ್ ನೀಡಿರುವ ಹೇಳಿಕೆಯೂ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಬಾರೀ ಪ್ರಚಾರ ಪಡೆದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರಿಗೆ ಕುಂದುಂಟು ಮಾಡಿದೆ. ಅಲ್ಲದೆ, ರಾಜ್ಯದಲ್ಲಿ ಅಶಾಂತಿ ಮೂಡಿ, ಕೋಮು ಸೌಹಾರ್ದತೆ ಹಾಳಾಗುತ್ತಿರುವುದು ಕಂಡು ಬರುತ್ತಿದೆ. ಅಶ್ವತ್ ನಾರಾಯಣ್ ಅವರು ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಸುಫಾರಿ ನೀಡಿರುವ ಸಂಶಯವಿದೆ. ಆದ್ದರಿಂದ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ, ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ದೂರಿನನ್ವಯ ಭಾರತೀಯ ದಂಡ ಸಂಹಿತೆ 506(ಕೊಲೆ ಬೆದರಿಕೆ), 513(ಗಲಭೆಗೆ ಪ್ರಚೋದನೆ) ಅಡಿ ದೇವರಾಜ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

Translate »