ಮೇ 31ರಿಂದ ಶಾಲೆಗಳು ಪುನಾರಂಭ
ಮೈಸೂರು

ಮೇ 31ರಿಂದ ಶಾಲೆಗಳು ಪುನಾರಂಭ

May 25, 2023

ಮೈಸೂರು, ಮೇ 24(ಆರ್‍ಕೆ)-ಮೇ 31ರಿಂದ ಶಾಲೆಗಳು ಪುನಾರಂಭಗೊಳ್ಳುತ್ತಿದ್ದು, ಮೇ 29 ರಂದು ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸು ಅವರು ತಿಳಿಸಿದ್ದಾರೆ. ಶಾಲಾ ಆರಂಭಕ್ಕೆ ಮಳೆ ಹಾನಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆಯೂ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಮೂಲಕ ಎಲ್ಲಾ ಶಾಲಾ ಮುಖ್ಯೋಪಾ ಧ್ಯಾಯರಿಗೆ ಸೂಚನೆಗಳನ್ನು ನೀಡಲಾಗಿದೆ.

ಮೈಸೂರು ಜಿಲ್ಲೆಯ 2,678 ಪ್ರಾಥಮಿಕ ಹಾಗೂ 768 ಪ್ರೌಢಶಾಲೆ ಸೇರಿದಂತೆ ಒಟ್ಟು 3,446 ಶಾಲೆಗಳಲ್ಲೂ ಮೇ 31ರಂದು ಮಕ್ಕಳನ್ನು ಸ್ವಾಗತಿಸಿ ಪಾಠ ಆರಂಭಿಸಬೇಕು. ಅದಕ್ಕೂ ಮೊದಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು, ಅವರು ಆದೇಶ ದಲ್ಲಿ ನಿರ್ದೇಶನ ನೀಡಿದ್ದಾರೆ.

ವಿಪತ್ತು ನಿರ್ವಹಣೆಗಾಗಿ ಈಗಾಗಲೇ ಶಿಕ್ಷಣ ಇಲಾಖೆಯಿಂದ ತಂಡಗಳನ್ನು ರಚಿಸಲಾಗಿದ್ದು, ಪ್ರತೀ ದಿನ ತಾಲೂಕು ಹಂತದಲ್ಲಿ ಬೀಳುವ ಮಳೆ ಪ್ರಮಾಣ ವರದಿ ಮಾಡುವುದು, ಶಿಥಿಲಾವಸ್ಥೆ ಇರುವ ಶಾಲಾ ಕಟ್ಟಡದ ಬಳಿ ಮಕ್ಕಳು ತೆರಳದಂತೆ ಎಚ್ಚರ ವಹಿಸುವುದು, ನದಿ ಪಾತ್ರದ ಶಾಲೆಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾದಾಗ ಆ ಶಾಲೆಗೆ ರಜೆ ನೀಡಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಪ ನಿರ್ದೇಶಕರು ಸೂಚಿಸಿದ್ದಾರೆ. ಮಳೆ ನೀರು ಚರಂಡಿ, ದೊಡ್ಡ ಮೋರಿಗಳ ಸಮೀಪವಿರುವ ಶಾಲೆಗಳಲ್ಲಿ ಅಗತ್ಯ ಮುಂಜಾಗ್ರತೆ ವಹಿಸಬೇಕು. ಮಳೆ ಪ್ರಮಾಣ ಜಾಸ್ತಿಯಾಗಿ ಶಾಲಾ ಕೊಠಡಿ ಹಾನಿಯಾದರೆ ತಕ್ಷಣ ತಹಶೀಲ್ದಾರ್‍ಗೆ ತಿಳಿಸಿ ಕ್ರಮ ಕೈಗೊಳ್ಳುವುದು. ಪ್ರವಾಹ ಪರಿಸ್ಥಿತಿ ಉಂಟಾದರೆ ಶಾಲೆಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಲು ಅನುವು ಮಾಡಿಕೊಡಬೇಕು. ತಾಲೂಕು ಹಂತದಲ್ಲಿ ವಿಪತ್ತು ನಿರ್ವಹಣೆ ಅಧಿಕಾರಿಗಳ ವಾಟ್ಸ್ ಆ್ಯಪ್ ಗುಂಪು ರಚಿಸಿ ಮಾಹಿತಿ ಹಂಚಿಕೊಳ್ಳಬೇಕು. ಹವಾಮಾನ, ನೀರಿನ ಹರಿವು, ನದಿ ಸ್ಥಿತಿ ಬಗ್ಗೆ ಎಲ್ಲಾ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ ಕ್ರಮ ವಹಿಸಬೇಕೆಂದು ಅವರು ತಿಳಿಸಿದ್ದಾರೆ.

ಚಾಲ್ತಿಯಲ್ಲಿರುವ ವರುಣ ಮಿತ್ರ ಸಹಾಯವಾಣಿ 9243345433ಗೆ ಮಾಹಿತಿ ನೀಡುವುದು, ಶಾಲೆ ಸುತ್ತಮುತ್ತಲಿನ ಚರಂಡಿ ತೆರೆದಿದ್ದರೆ ಮುಚ್ಚಿಸಬೇಕು. ವಿದ್ಯುತ್ ತಂತಿ ಅಪಾಯದ ಸ್ಥಿತಿಯಲ್ಲಿದ್ದರೆ ಸೆಸ್ಕ್ ಅಧಿಕಾರಿಗಳಿಂದ ಸರಿಪಡಿಸಬೇಕು. ಮಳೆಗಾಲದಲ್ಲಿ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ವಿಪತ್ತು ನಿರ್ವಹಣೆ ಅಧಿಕಾರಿಗಳ ಮೊಬೈಲ್ ನಂಬರ್ ಅನ್ನು ಎಲ್ಲಾ ಶಾಲೆಗಳಿಗೆ ಒದಗಿಸಬೇಕು. ಅಪಾಯಕಾರಿ ಮರ, ರೆಂಬೆಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕೆಂದೂ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ.

Translate »