ಮುಂಗಾರು ಮುನ್ನೆಚ್ಚರಿಕೆ; ಶೀಘ್ರವೇ ಕೊಡಗಿಗೆ ಎನ್‍ಡಿಆರ್‍ಎಫ್ ತಂಡ
ಕೊಡಗು

ಮುಂಗಾರು ಮುನ್ನೆಚ್ಚರಿಕೆ; ಶೀಘ್ರವೇ ಕೊಡಗಿಗೆ ಎನ್‍ಡಿಆರ್‍ಎಫ್ ತಂಡ

May 25, 2023

ಮಡಿಕೇರಿ, ಮೇ 24-ಜೂನ್ 4ರಿಂದ ರಾಜ್ಯ ದಲ್ಲಿ ಮುಂಗಾರು ಆರಂಭವಾಗಲಿದ್ದು, ಈ ವೇಳೆಗೆ ಕೊಡಗು ಜಿಲ್ಲೆಗೆ ಎನ್‍ಡಿಆರ್‍ಎಫ್ ತಂಡ ಆಗಮಿಸುವ ನಿರೀಕ್ಷೆ ಇದೆ. ಜೂನ್ 9 ಮತ್ತು 10ರಂದು ಜಿಲ್ಲೆಯ ಕೆಲವು ಕಡೆಗಳಲ್ಲಿ ಜನ-ಜಾನುವಾರು ರಕ್ಷಣೆ ಕುರಿತು ಎನ್.ಡಿ.ಆರ್.ಎಫ್ ಯೋಧರ ತಂಡ ಅಣುಕು ಪ್ರದರ್ಶನ ನೀಡುವ ಮೂಲಕ ಸಾರ್ವ ಜನಿಕರ ರಕ್ಷಣೆಯ ಅಭಯ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಹೊರ ರಾಜ್ಯದಿಂದ ಬರುವ ಎನ್‍ಡಿಆರ್‍ಎಫ್ ತಂಡ ಈ ಹಿಂದೆ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ಉಳಿದುಕೊಳ್ಳುತ್ತಿತ್ತು. ಈ ಬಾರಿ ಆರ್‍ಟಿಓ ಕಚೇರಿ ಬಳಿಯ ಪೊಲೀಸ್ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡ ಲಾಗಿದೆ ಎಂದು ಹೇಳಿದರು.

ಅನುಭವದ ಆಧಾರದಲ್ಲಿ ತಯಾರಿ: ಈ ಹಿಂದಿನ ಅನುಭವದ ಆಧಾರದಲ್ಲಿ ಪ್ರವಾಹ, ಭೂ ಕುಸಿತ, ರಸ್ತೆ ಸಂಪರ್ಕ ಕಡಿತ ಮತ್ತಿತರ ಪ್ರದೇಶಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಗುರುತು ಮಾಡಿದೆ. ಅತಿಯಾದ ಮಳೆಯಿಂದ ಭೂಕುಸಿತ, ಪ್ರವಾಹ ಎದುರಾದಲ್ಲಿ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಸೂಕ್ತ ಸ್ಥಳದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಸರಕಾರ ಕೂಡ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ನೀಡಬೇಕಾದ ತಿಂಡಿ, ಊಟ ಹಾಗೂ ಇನ್ನಿತರೆ ಮೂಲ ಸೌಲಭ್ಯಗಳನ್ನು ಒದಗಿಸುವ ಮಾರ್ಗಸೂಚಿ ನೀಡಿದರೆ. ಅದರಂತೆಯೇ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಲಿದೆ ಎಂದು ಹೇಳಿದರು.

ಈ ಬಾರಿಯ ಮಳೆಗಾಲದಲ್ಲಿ ಎಂತಹ ಪರಿಸ್ಥಿತಿ ಎದುರಿಸಲು ಕೊಡಗು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಮಳೆಗಾಲಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶನ ಗಳನ್ನು ನೀಡಿದ್ದು, ಅದರಂತೆಯೇ ಸಿದ್ದತೆಗಳನ್ನು ಕೊಡಗು ಜಿಲ್ಲಾಡಳಿತ ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಚೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಅರಣ್ಯ, ನೀರಾವರಿ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಳೆಗಾಲ ಎದುರಿಸಲು ಸಜ್ಜಾಗುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಬಾರಿ ಕಳೆದ ಸಾಲಿಗಿಂತ ಹೆಚ್ಚಾಗಿಯೇ ಶೇ.100ರಷ್ಟು ಸಿದ್ದತೆಗಳು ಪೂರ್ವ ಮಾನ್ಸೂನ್ ಅವಧಿಯಲ್ಲಿಯೇ ಅನುಷ್ಠಾನ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾತೆಯಲ್ಲಿದೆ 57 ಕೋಟಿ ರೂ.: ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಸರಕಾರದ ಒಟ್ಟು 57 ಕೋಟಿ ರೂ. ಅನುದಾನವಿದೆ. ಈಗಾಗಲೇ ಮೀಸಲಿಟ್ಟಿರುವ ಕಾಮಗಾರಿ ಗಳನ್ನು ಹೊರತುಪಡಿಸಿದರೆ ಪ್ರಾಕೃತಿಕ ವಿಕೋಪ ಎದುರಿಸುವ ಸಲುವಾಗಿಯೇ 20 ಕೋಟಿ ರೂ. ಅನುದಾನ ಲಭ್ಯವಿದೆ. 5 ಕೋಟಿ ರೂ. ಮತ್ತು ಅದಕ್ಕಿಂತ ಕಡಿಮೆ ಅನುದಾನ ಪಿ.ಡಿ. ಖಾತೆಯಲ್ಲಿ ಉಳಿದುಕೊಂಡಿದ್ದಲ್ಲಿ ಜಿಲ್ಲಾಡಳಿತದಿಂದ ಮನವಿ ಸಲ್ಲಿಸಿದ್ದಲ್ಲಿ ಒಂದೇ ದಿನದಲ್ಲಿ ಸರಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈಗಾಗಲೇ ಸುರಿದ ಮಳೆಯಿಂದ ಕೆಲವು ಕಡೆಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಆ ಘಟನೆಗಳನ್ನು ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಹಾನಿ ಸಂಭವಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರ ಖಾತೆಗಳಿಗೆ ಹಾನಿಗೆ ಅನುಗುಣವಾಗಿ ಪರಿಹಾರ ವಿತರಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Translate »