ರಾಷ್ಟ್ರೀಯ ಶಿಕ್ಷಣ ನೀತಿಗೆ ಎಎಸ್‍ಡಿಎಸ್‍ಓ ವಿರೋಧ
ಮೈಸೂರು

ರಾಷ್ಟ್ರೀಯ ಶಿಕ್ಷಣ ನೀತಿಗೆ ಎಎಸ್‍ಡಿಎಸ್‍ಓ ವಿರೋಧ

December 10, 2021

ಮೈಸೂರು,ಡಿ.9(ಪಿಎಂ)-ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‍ಇಪಿ) ವಿದ್ಯಾರ್ಥಿ ವಿರೋಧಿಯಾಗಿದೆ. ಇದರ ಅನುಷ್ಠಾನದಿಂದ ಶೈಕ್ಷಣಿಕ ಸಮಸ್ಯೆಗಳು ಉಂಟಾ ಗಿವೆ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ನೇತೃತ್ವ ದಲ್ಲಿ ವಿವಿಧ ಪದವಿ ಕಾಲೇಜು ವಿದ್ಯಾರ್ಥಿ ಗಳು ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಕೃಷ್ಣರಾಜ-ಬುಲೇ ವಾರ್ಡ್ ರಸ್ತೆಯಲ್ಲಿರುವ ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದೆ. ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವ್ಯಾಪಕ ವಿರೋ ಧದ ನಡುವೆಯೂ ರಾಜ್ಯ ಸರ್ಕಾರ ತರಾ ತುರಿಯಲ್ಲಿ ಎನ್‍ಇಪಿ ಜಾರಿಗೊಳಿಸಿದೆ ಎಂದು ಆರೋಪಿಸಿದರು.

ಮೈಸೂರು ವಿಶ್ವವಿದ್ಯಾನಿಲಯವು ಈ ನೀತಿಯನ್ನು ಸರಿಯಾಗಿ ವಿಮರ್ಶಿಸದೆ, ಪೂರ್ವಾಪರಗಳನ್ನು ವಿವೇಚಿಸದೆ ಜಾರಿಗೆ ತರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಲವು ವಿಧದ ಸಮಸ್ಯೆಗಳಾಗುತ್ತಿವೆ. ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಡಬೇಕು. ಬೋಧಕರ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.

ನೂತನ ನೀತಿಯ ತರಾತುರಿ ಜಾರಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವಾಗಲಿದೆ. ನಾಲ್ಕು ವರ್ಷದ ಪದವಿಯಲ್ಲಿ ಉಂಟಾ ಗಿರುವ ಗೊಂದಲಗಳೇ ಇದಕ್ಕೆ ಸಾಕ್ಷಿ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ತರಗತಿಗಳು ಆರಂಭವಾಗಿದ್ದು, ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯಲಿವೆ. ಆದರೆ ಇನ್ನೂ ಪಠ್ಯಕ್ರಮ ತಯಾರಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೇ ಲಭ್ಯ ವಾಗಿಲ್ಲ ಎಂದು ಆರೋಪಿಸಿದರು.

ಪಾಠ ಮಾಡಲು ಸಾಮಗ್ರಿಗಳ ಕೊರತೆ ಮಾತ್ರವಲ್ಲದೆ, ಬೋಧಕರ ಕೊರತೆಯೂ ಇದ್ದು, ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲು ಕಿದ್ದಾರೆ. ಇದರೊಂದಿಗೆ ನಾಲ್ಕು ವರ್ಷದ ಪದವಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾ ಗದ ಮೂಲ ವಿಷಯದ ಜೊತೆಗೆ ಸಿಬಿಸಿಎಸ್ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಅಡಿ ಯಲ್ಲಿ ಮತ್ತೊಂದು ವಿಭಾಗದ ವಿಷಯ ಓದಬೇಕಿದೆ. ಅಂದರೆ, ವಿದ್ಯಾರ್ಥಿ ತನ್ನ ವಿಷಯಕ್ಕೆ ಸಂಬಂಧವೇ ಇರದ ಮತ್ತೊಂದು ವಿಷಯ ಓದಲೇಬೇಕು. ಹೀಗೆ ಕಡ್ಡಾಯ ಹೇರಿಕೆ ಸರಿಯಲ್ಲ ಎಂದು ಕಿಡಿಕಾರಿದರು.

ನೂತನ ಶಿಕ್ಷಣ ನೀತಿ ಜಾರಿಯಾದ ಸಂದರ್ಭದಲ್ಲಿ ಅದರ ಬಗ್ಗೆ ಶಿಕ್ಷಣ ತಜ್ಞರು, ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಬೇಕು. ಆ ಬಳಿಕ ಪಠ್ಯಕ್ರಮ ತಯಾ ರಿಸುವ ಪ್ರಕ್ರಿಯೆಗೆ ಕನಿಷ್ಠ ಒಂದೆರಡು ವರ್ಷ ಗಳು ಬೇಕಾಗುತ್ತವೆ. ಆದರೆ ಎನ್‍ಇಪಿ-2020 ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ತಾನೇ ಮೊದಲು ಅನುಷ್ಠಾನಕ್ಕೆ ತಂದೆ ಎಂಬ ಹೆಗ್ಗಳಿಕೆಗೆ ರಾಜ್ಯ ಸರ್ಕಾರವು, ತರಾತುರಿ ಯಲ್ಲಿ ಜಾರಿ ಮಾಡಿತು. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ರವಿ, ಎಐಡಿಎಸ್‍ಓ ಜಿಲ್ಲಾಧ್ಯಕ್ಷ ಸುಭಾಷ್, ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷ ಆಸಿಯಾ ಬೇಗಂ, ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಮರಿ ದೇವಯ್ಯ, ಮೈಸೂರು ವಿವಿ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಸಿದ್ದರಾಜು, ದರ್ಶನ್, ಯೋಗೀಶ್ ಸೇರಿದಂತೆ ವಿವಿಧ ಪದವಿ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »