ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತವಾದ  ಸಿದ್ದಲಿಂಗಪುರದ ಷಷ್ಠಿ ಜಾತ್ರಾ ಮಹೋತ್ಸವ
ಮೈಸೂರು

ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತವಾದ ಸಿದ್ದಲಿಂಗಪುರದ ಷಷ್ಠಿ ಜಾತ್ರಾ ಮಹೋತ್ಸವ

December 10, 2021

ಮೈಸೂರು, ಡಿ.9(ಎಂಟಿವೈ)- ಕೊರೊನಾ ಮತ್ತು ರೂಪಾಂತರಿ ವೈರಸ್ ಒಮಿಕ್ರಾನ್ ಆತಂಕ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾತ್ರಾ ಮಹೋ ತ್ಸವ ನಿಷೇಧಿಸಿರುವುದರಿಂದ ಗುರುವಾರ ಮೈಸೂರು ತಾಲೂಕಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾ ಲಯದಲ್ಲಿ ಸರಳ ಹಾಗೂ ಸಾಂಪ್ರ ದಾಯಿಕವಾಗಿ ವಿಶೇಷ ಷಷ್ಠಿ ಪೂಜಾ ಮಹೋತ್ಸವ ಜರುಗಿತು.
ಪ್ರತಿವರ್ಷ ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲ ಯದಲ್ಲಿ ವೈಭವದಿಂದ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಕುಕ್ಕೆ ಸುಬ್ರ ಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದವರು ಸಿದ್ದಲಿಂಗಪುರದ ಷಷ್ಠಿ ಸುಬ್ರಹ್ಮಣ್ಯೇಶ್ವರ ದೇವಾಲಯಕ್ಕೆ ಬಂದು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಜಾತ್ರೆ ರದ್ದಾದ ವಿಷಯ ತಿಳಿಯದೇ ನೂರಾರು ಮಂದಿ ದೇವಾಲಯಕ್ಕೆ ಬರುತ್ತಲೇ ಇದ್ದರು. ಬಂದ ಭಕ್ತರೆಲ್ಲರೂ ದೇವಾಲಯದ ಮುಂಭಾಗದ ರಸ್ತೆ ಬದಿಯಲ್ಲೇ ತಾವೇ ಪೂಜೆ ಮಾಡಿಕೊಂಡು ಕೈ ಮುಗಿದು ವಾಪಸ್ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಸ್ಕಂಧ ಷಷ್ಠಿ ಹಿನ್ನೆಲೆಯಲ್ಲಿ ಇಂದು ಮುಂಜಾನೆ 3 ಗಂಟೆಯಿಂದಲೇ ದೇವಾಲ ಯದ ಮುಖ್ಯ ಅರ್ಚಕ ಎಂ.ವಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಅಷ್ಟ್ಟಾವಧಾನ ಪೂಜೆ, ಮಹನ್ಯಾಸಪೂರ್ವಕ, ರುದ್ರಾಭಿಷೇಕ ಹಾಗೂ ಇನ್ನಿತರ ಪೂಜಾ ಕೈಂಕರ್ಯ ನೆರವೇರಿತು. ಬಳಿಕ ದೇವಾಲಯದಲ್ಲಿರುವ ಹುತ್ತಕ್ಕೆ 6 ಅಡಿ ಎತ್ತರದ ಬೆಳ್ಳಿ ನಾಗಾಭರಣದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಕಂಗೊಳಿಸಿದ ನಾಗಾಭರಣ: ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೆಸರಿನಲ್ಲಿ ಸಿದ್ದಲಿಂಗ ಪುರದ ಷಷ್ಠಿ ದೇವಾಲಯಕ್ಕೆ ನೀಡಿರುವ ಬೆಳ್ಳಿ ನಾಗಾಭರಣವು 6 ಅಡಿ ಎತ್ತರವಿದ್ದು, 7 ಹೆಡೆ, 14 ಕೆಂಪು ಕಣ್ಣು, 7 ಹಸಿರು ಪಚ್ಚೆ ನಾಲಿಗೆ ಹೊಂದಿದೆ. ಈ ನಾಗಾಭರಣ ವನ್ನು ಪ್ರತಿವರ್ಷ ಸ್ಕಂಧ ಷಷ್ಠಿ ದಿನದಂದು ಅರಮನೆಯಿಂದ ತಂದು ದೇವಾಲಯದ ಹುತ್ತಕ್ಕೆ ಧರಿಸಿ, ಅಲಂಕಾರ ಮಾಡುವ ಸಂಪ್ರದಾಯವಿದೆ. ಇಂದು ರಾತ್ರಿ 10 ಗಂಟೆಗೆ ನಾಗಾಭರಣವನ್ನು ಅರಮನೆಗೆ ಕೊಂಡೊಯ್ದು ಹಿಂದಿರುಗಿಸಲಾಗುತ್ತದೆ.
300 ವರ್ಷದ ಇತಿಹಾಸ: ಸಿದ್ದಲಿಂಗ ಪುರದ ಈ ದೇವಾಲಯ 300ಕ್ಕೂ ಅಧಿಕ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಮೈಸೂರು ಭಾಗದಲ್ಲಿ `ಚಿಕ್ಕ ಸುಬ್ರಹ್ಮಣ್ಯ’ ಎಂದೇ ಪ್ರಸಿದ್ಧಿ ಹೊಂದಿರುವ ಈ ಕ್ಷೇತ್ರ ಹಲವಾರು ನಂಬಿಕೆ ಮತ್ತು ಆಚರಣೆಗೆ ಬುನಾದಿ ಹಾಕಿ ಕೊಟ್ಟಿದೆ. ಸಿದ್ದಲಿಂಗ ಪುರ, ಕಳಸ್ತವಾಡಿ, ಮೇಳಾಪುರ, ನಾಗನಹಳ್ಳಿ, ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಈ ಜಾತ್ರಾ ಮಹೋತ್ಸವದಲ್ಲಿ ಸಕ್ರಿಯ ವಾಗಿ ಪಾಲ್ಗೊಂಡು, ಪೂಜೆ ಸಲ್ಲಿಸುತ್ತಾರೆ.

ಹಾಲು-ತುಪ್ಪ ಎರೆದರು: ದೇವಾ ಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಹಲವು ಮಂದಿ ಮುಂಭಾ ಗದ ರಸ್ತೆಯಲ್ಲಿ ಪೂಜೆ ಮಾಡಿ ಸುಬ್ರ ಹ್ಮಣ್ಯೇಶ್ವರ ಸ್ವಾಮಿಗೆ ನಮಿಸಿ, ಪ್ರಾರ್ಥಿಸಿ ದರು. ಬಳಿಕ ದೇವಾಲಯದಿಂದ ಅರ್ಧ ಕಿ.ಮಿ ದೂರದಲ್ಲಿರುವ ನಾಗನಹಳ್ಳಿ ರಸ್ತೆಯ ತಿರುವಿನಲ್ಲಿದ್ದ ಹುತ್ತಕ್ಕೆ ಭಕ್ತರು ತನಿ ಎರೆದು ವಿಶೇಷ ಪೂಜೆ ಸಲ್ಲಿಸಿದರು. ಸ್ಥಳದಲ್ಲಿಯೇ ಹಾಲು, ಬೆಣ್ಣೆ ಮಾರಾ ಟವೂ ಇತ್ತು. ಹುತ್ತಕ್ಕೆ ತನಿ ಎರೆಯಲು ಬೇಕಾದ `ಚಿನ್ನ-ಬೆಳ್ಳಿ’ ನಾಗರ ಪುಟ್ಟ ಮೂರ್ತಿಗಳು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿತ್ತು.

ಚುನಾವಣೆ ಹಿನ್ನೆಲೆಯಲ್ಲಿ ಜಾತ್ರೆ, ಸಂತೆ ನಿಷೇಧಿಸಲಾಗಿತ್ತಾದರೂ ಷಷ್ಠಿ ಜಾತ್ರೆ ಅಂಗ ವಾಗಿ ರಸ್ತೆ ಬದಿಯಲ್ಲಿ ತಲೆ ಎತ್ತಿದ್ದ ಕಡಲೆಪುರಿ, ಸಿಹಿ ತಿನಿಸು, ಆಟಿಕೆ, ವಿವಿಧ ಗೃಹೋಪಯೋಗಿ ವಸ್ತುಗಳು, ಬಟ್ಟೆ ವ್ಯಾಪಾರ, ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆ ಜಾತ್ರೆಗೆ ಮೆರಗು ನೀಡಿದವು. ಅಲ್ಲದೆ ಕಬ್ಬು, ಆಲೆಮನೆ ಬೆಲ್ಲವನ್ನೂ ಮಾರಾಟ ಮಾಡಲಾಗುತ್ತಿತ್ತು.

ದೇವಾಲಯದ ಸಮೀಪಕ್ಕೆ ಭಕ್ತರು ಬರು ವುದನ್ನು ತಡೆಗಟ್ಟಲು ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಮೇಟಗಳ್ಳಿ ಪೊಲೀ ಸರು ಬಂದೋಬಸ್ತ್‍ನಲ್ಲಿ ಪಾಲ್ಗೊಂಡಿದ್ದರು.

Translate »