ವಿದೇಶಿಯನ ನೆರವಿಂದ ಅಂಗ ವೈಕಲ್ಯನಿಗೆ ಶಸ್ತ್ರ ಚಿಕಿತ್ಸೆ
ಮೈಸೂರು

ವಿದೇಶಿಯನ ನೆರವಿಂದ ಅಂಗ ವೈಕಲ್ಯನಿಗೆ ಶಸ್ತ್ರ ಚಿಕಿತ್ಸೆ

June 9, 2018

ಮೈಸೂರು:  ಅಂಗವೈಕಲ್ಯದಿಂದ ಬಳಲುತ್ತಿದ್ದ ಬಾಲಕನೊಬ್ಬನಿಗೆ ವಿದೇಶಿ ವ್ಯಕ್ತಿಯೊಬ್ಬರ ಆರ್ಥಿಕ ನೆರವಿನಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಮತ್ತು ಪರಶು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಯಡಿಯೂರು ತಾಲೂಕಿನ ಕೊಡವತ್ತಿ ಗ್ರಾಮದ ನಿವಾಸಿ ರಾಜು ಅವರ ಪುತ್ರ ವೆಂಕಟೇಶ್ ಅಂಗವೈಕಲ್ಯತೆಯಿಂದ ಬಳಲುತ್ತಿದ್ದ. ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿಯಲ್ಲಿದ್ದ ರಾಜು ಅವರು ನಮ್ಮ ಸಂಸ್ಥೆಗೆ ಶಿಕ್ಷಣ ಮತ್ತು ಆರೈಕೆಗಾಗಿ ದಾಖಲಿಸಿದ್ದರು ಎಂದು ವಿವರಿಸಿದರು.

ಒಡನಾಡಿ ಸಂಸ್ಥೆಗೆ ಭೇಟಿ ನೀಡಿದ್ದ ಇಂಗ್ಲೆಂಡ್‍ನ ಶೇರ್‍ವುಡ್ ಫಾರೆಸ್ಟ್ ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ಜಿಮ್‍ಮೇಸನ್ ಅವರು ವೆಂಕಟೇಶ್‍ನ ಅಂಗವೈಕಲ್ಯ ಸರಿಪಡಿಸಲು ಆರ್ಥಿಕ ನೆರವು ನೀಡಿದರು. ಅವರ ನೆರವಿನೊಂದಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೆಂಕಟೇಶ್‍ಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಇದೀಗ ವೆಂಕಟೇಶ್‍ನ ಪಾದ ಶೇ.50ರಷ್ಟು ಸರಿಯಾಗಿದ್ದು, ಇನ್ನು ಕೆಲವೇ ವಾರಗಳಲ್ಲಿ ವೆಂಕಟೇಶ್ ಎಲ್ಲರಂತೆ ನಡೆದಾಡುವ ವಿಶ್ವಾಸವಿದೆ ಎಂದು ಹೇಳಿದರು. ಬಾಲಕ ವೆಂಕಟೇಶ್ ಹಾಗೂ ಈತನ ತಂದೆ ರಾಜು ಗೋಷ್ಠಿಯಲ್ಲಿದ್ದರು.

Translate »