ಬುದ್ಧಿಮಾಂದ್ಯರಿಗೂ ನೂತನ ‘ಆಯುಷ್ಮಾನ್ ಭಾರತ’ ನೆರವು
ಮೈಸೂರು

ಬುದ್ಧಿಮಾಂದ್ಯರಿಗೂ ನೂತನ ‘ಆಯುಷ್ಮಾನ್ ಭಾರತ’ ನೆರವು

September 15, 2018

ಬೆಂಗಳೂರು: ಬುದ್ಧಿಮಾಂದ್ಯ ರೋಗಿಗಳಿಗೂ ನೂತನ ಆಯುಷ್ಮಾನ್ ಭಾರತ ಯೋಜನೆಯಡಿ ಔಷಧೋಪಚಾರ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಇಂದಿಲ್ಲಿ ತಿಳಿಸಿದರು.

ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ತಿಂಗಳ 25ರಿಂದ ಕೇಂದ್ರ ಸರ್ಕಾರ ಪ್ರಾಯೋಜಿತ ‘ಆಯುಷ್ಮಾನ್ ಭಾರತ’ ಯೋಜನೆ ಪ್ರಾರಂಭವಾಗಲಿದೆ. ಯೋಜನಾ ವ್ಯಾಪ್ತಿಗೆ ಬುದ್ಧಿಮಾಂದ್ಯ ರೋಗಿಗಳ ಸೇರ್ಪಡೆಗೆ ಗಂಭೀರ ಚಿಂತನೆ ನಡೆದಿದೆ ಎಂದರು.

ಇದರಿಂದ ಚಿಕಿತ್ಸೆಗೆ ತಗಲುವ ವೆಚ್ಚ, ಔಷಧಿ ವೆಚ್ಚವನ್ನೂ ಕೇಂದ್ರವೇ ಭರಸಲಿದೆ. ಯೋಜನೆ ವ್ಯಾಪ್ತಿಗೆ ವಿವಿಧ ಕ್ಷೇತ್ರಗಳ ಪರಿಣಿತರು ಅವರ ಕುಟುಂಬದ ಸಹ ಸದಸ್ಯರನ್ನು ಸೇರ್ಪಡೆ ಮಾಡಲಾಗುವುದು.

ಬುದ್ಧಿಮಾಂದ್ಯ ರೋಗಿಗಳ ಮೂಲ ಸಮಸ್ಯೆ ಪತ್ತೆ ಮಾಡಿ ಮಾನಸಿಕ ತಜ್ಞರು ಹಾಗೂ ಕುಟುಂಬ ಸದಸ್ಯರ ನೆರವು ಪಡೆಯಲಾಗುವುದು. ಕೇವಲ ಚಿಕಿತ್ಸೆಯಿಂದ ಪರಿಹಾರ ಸಾಧ್ಯವಿಲ್ಲ, ಸಮಾಜ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು.

ದೇಶದಾದ್ಯಂತ 2020ರ ವೇಳೆಗೆ ಒಂದೂವರೆ ಲಕ್ಷ ಜೆನರಿಕ್ ಔಷಧ ಮಳಿಗೆ ತೆರೆಯುವ ಗುರಿ ಹೊಂದಲಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಔಷಧಿಗಳು ದೊರೆಯುವುದಲ್ಲದೆ, ಉತ್ತಮ ಆರೋಗ್ಯ ಹೊಂದಲು ಅನುಕೂಲವಾಗುತ್ತದೆ.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ರೋಗ ಪತ್ತೆ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ನಿಯಮ ಜಾರಿ ಚಿಂತನೆ ಇದೆ. ಇದರಿಂದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಕಷ್ಟ ತಪ್ಪುತ್ತದೆ ಎಂದರು.

ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಆಯುಷ್ಮಾನ್ ಭಾರತ ಯೋಜನೆಯನ್ನು ಕರ್ನಾಟಕದ ಆರೋಗ್ಯ ಯೋಜನೆ ವ್ಯಾಪ್ತಿಗೆ ತರುವ ಚಿಂತನೆ ಇದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು, ಆಯುಷ್ಮಾನ್ ಭಾರತ ಯೋಜನೆಗೆ ರಾಜ್ಯ ಎಲ್ಲಾ ಸಹಕಾರ ನೀಡಲಿವೆ ಎಂದರು.

Translate »