ಮೈಸೂರು, ಜೂ.5(ಎಸ್‍ಪಿಎನ್)- ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗದ 30 ಮಂದಿ ಹಾಸ್ಯ ನಟ-ನಟಿಯರು ಮತ್ತು ಪೋಷಕ ಕಲಾವಿದರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆರ್ಥಿಕ ನೆರವು ಹಸ್ತಾಂತರಿಸಿದರು. ಮೈಸೂರು ನಜರ್‍ಬಾದ್‍ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಫಲ ತಾಂಬೂಲದ ಜೊತೆಗೆ ಆರ್ಥಿಕ ನೆರವನ್ನು ವಿತರಿಸಿ ಮಾತನಾಡಿದ ಸಚಿವರು, ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ರಾಜ್ಯ ಸರ್ಕಾರ ಧಾವಿಸಲಿದೆ. ಕಲಾವಿದರು ಹೆದರುವ ಅಗತ್ಯವಿಲ್ಲ ಎಂದರು.
ನಂತರ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಕನ್ನಡ ಚಿತ್ರರಂಗದ ನೂರಾರು ಕಲಾವಿದರು ಸಂಕಷ್ಟದಲ್ಲಿದ್ದಾರೆ. ಆದರೆ, ಕನ್ನಡ ಜನತೆ ಸಂಕಷ್ಟದಲ್ಲಿದ್ದ ಕಲಾವಿದರಿಗೆ ದಿನಸಿ ಕಿಟ್, ಆರ್ಥಿಕ ನೆರವು, ಅಗತ್ಯವಿದ್ದವರಿಗೆ ಔಷಧಿ ಒದಗಿಸಿದ್ದಾರೆ. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ನಿರ್ಮಾಪಕರಾದ ಸಂದೇಶ್ ನಾಗರಾಜ್, ನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್, ರಾಜಕೀಯ ಮುಖಂಡ ಹೆಚ್.ವಿ.ರಾಜೀವ್, ಉದ್ಯಮಿ ಅಮರನಾಥ್ ರಾಜೇ ಅರಸ್ ಅವರು ನೆರವಾಗಿರುವುದು ಸಂತಸ ಉಂಟು ಮಾಡಿದೆ ಎಂದರು.
ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್, ಪೋಷಕ ನಟಿ ರೇಖಾದಾಸ್, ವೈದ್ಯನಾಥ್ ಬಿರಾದಾರ್, ಶಂಕರ್ ಅಶ್ವಥ್, ಮೈಸೂರು ರಮಾನಂದ ಸೇರಿದಂತೆ 30 ಕಲಾವಿದರಿಗೆ ತಲಾ 8 ಸಾವಿರ ರೂ.ಗಳಂತೆ ಆರ್ಥಿಕ ನೆರವು ವಿತರಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷ ಎಸ್.ಡಿ.ಮಹೇಂದ್ರ, ಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್, ಮೈಮುಲ್ ನಿರ್ದೇಶಕ ಅಶೋಕ್, ಬಿಜೆಪಿ ಮುಖಂಡರಾದ ಸಿ.ಸಂದೀಪ್, ಸೋಮೇಶ್, ಧರ್ಮೇಂದ್ರ, ಅದ್ವೈತ್, ಶಿವು, ರಾಮಚಂದ್ರ, ಪ್ರಭಾಕರ್ ಇದ್ದರು.