ವಿರಾಜಪೇಟೆಯಲ್ಲಿ ಲೈನ್‍ಮೆನ್ ಮೇಲೆ ಹಲ್ಲೆ
ಕೊಡಗು

ವಿರಾಜಪೇಟೆಯಲ್ಲಿ ಲೈನ್‍ಮೆನ್ ಮೇಲೆ ಹಲ್ಲೆ

March 6, 2020

ವಿರಾಜಪೇಟೆ, ಮಾ.5- ವಿರಾಜಪೇಟೆ ವ್ಯಾಪ್ತಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಎಂಬಾತನ ಮೇಲೆ ಗಣಪತಿ ಎಂಬಾತ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣಪತಿ ತಲೆ ಮರೆಸಿ ಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣವನ್ನು ಚೆಸ್ಕಾಂ ಸಿಬ್ಬಂದಿಗಳು ಖಂಡಿಸಿದ್ದು, ಕರ್ತವ್ಯನಿರತ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಂಘದ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ: ಮೂಲತಃ ಹುಬ್ಬಳ್ಳಿ ಕುಂದಗೋಳ ನಿವಾಸಿ ಯಾಗಿರುವ ಮಂಜುನಾಥ ಕಳೆದ 3 ವರ್ಷಗಳಿಂದ ವಿರಾಜಪೇಟೆ ಉಪ ವಿಭಾಗದಲ್ಲಿ ಲೈನ್‍ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ಕರ್ತವ್ಯ ನಿಮಿತ್ತ ಮಂಜುನಾಥ್, ಪ್ರತಾಪ್ ಅವರುಗಳು ಮಗ್ಗುಲ ಗ್ರಾಮದ ಗಣಪತಿ ಎಂಬುವರ ಮನೆಗೆ ಮೀಟರ್ ಬಿಲ್ ನೀಡಲು ತೆರಳಿದ್ದರು. ಈ ಸಂದರ್ಭ ತಾವೇ ರೀಡಿಂಗ್ ನೋಡುವುದಾಗಿ ಗಣಪತಿ ಹೇಳಿದರು ಎನ್ನಲಾಗಿದೆ. ಈ ಸಂದರ್ಭ ತಾವೇ ಖುದ್ದಾಗಿ ನೋಡಿ ಮೀಟರ್‍ನ ಫೋಟೊ ತೆಗೆಯಬೇಕು ಎಂದು ಮಂಜುನಾಥ್ ಹೇಳಿದರೆನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಗಣಪತಿ ಏಕಾಏಕಿ ಮಂಜುನಾಥ್ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಮಾತ್ರವಲ್ಲದೇ, ಸ್ಥಳದಿಂದ ತೆರಳದೇ ಇದ್ದಲ್ಲಿ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಗಾಬರಿಯಾದ ಲೈನ್ ಮ್ಯಾನ್ ಮಂಜುನಾಥ್ ಮತ್ತು ಪ್ರತಾಪ್ ವಾಪಸ್ಸಾಗಿ ಜೀವ ಉಳಿಸಿಕೊಂಡಿದ್ದಾರೆ.

ಕಪಾಳ ಮೋಕ್ಷದಿಂದ ಗಾಯಗೊಂಡಿರುವ ಮಂಜುನಾಥ್ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ವಿರಾಜಪೇಟೆ ನಗರ ಪೊಲೀಸರು ಮಗ್ಗುಲ ಗ್ರಾಮದ ಗಣಪತಿ ಅವರ ಮನೆಗೆ ತೆರಳಿದ ಸಂದರ್ಭ, ಆರೋಪಿ ಗಣಪತಿ ನಾಪತ್ತೆಯಾಗಿದ್ದು ಪೋಲಿಸರು ತೀವ್ರ ಶೋಧ ಕೈಗೊಂಡಿದ್ದಾರೆ.

ಕಳೆದ ಎರಡೂವರೆ ತಿಂಗಳಲ್ಲಿ ಇದು ಮೂರನೇ ಹಲ್ಲೆ ಪ್ರಕರಣ ವಾಗಿದ್ದು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರಾಜಪೇಟೆ ಚೆಸ್ಕಾಂನ ಜೂನಿಯರ್ ಇಂಜಿನಿಯರ್ ಶಿವಣ್ಣಗೌಡ ಪಾಟೀಲ್ ಒತ್ತಾಯಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಚೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಯೋಗರಾಜ್ ಎಚ್ಚರಿಸಿದ್ದಾರೆ.

Translate »