ಅನಿತಾ ಕಾರ್ಯಪ್ಪಗೆ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ’
ಕೊಡಗು

ಅನಿತಾ ಕಾರ್ಯಪ್ಪಗೆ ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ’

March 6, 2020

ಮಡಿಕೇರಿ, ಮಾ.5- ಕೊಡಗಿನ ಹಿರಿಯ ರಂಗಭೂಮಿ ನಟಿ ಶ್ರೀಮತಿ ಅಡ್ಡಂಡ ಅನಿತಾ ಕಾರ್ಯಪ್ಪ ಅವರಿಗೆ ಈ ಬಾರಿಯ ಪ್ರತಿಷ್ಠಿತ ಕಿತ್ತೂರುರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಲಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿ ರೂ.25,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಮಾ.8 ರಂದು ಮಹಿಳಾ ದಿನಾಚರಣೆಯ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11.00 ಗಂಟೆಗೆ ಈ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ್ ಮಾಹಿತಿ ನೀಡಿದ್ದಾರೆ.

ಶ್ರೀಮತಿ ಅಡ್ಡಂಡ ಅನಿತಾ ಕಾರ್ಯಪ್ಪ ಕಳೆದ 40 ವರ್ಷಗಳಿಂದ ನಿರಂತರವಾಗಿ ಕೊಡಗಿನಲ್ಲಿ ರಂಗಭೂಮಿ ಸೇವೆಯಲ್ಲಿದ್ದಾರೆ. ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಕೊಡಗಿನಲ್ಲಿ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಏಕೈಕ ನಟಿ. ಕೊಡಗಿನ ರಂಗಭೂಮಿಗೆ ಅನನ್ಯ ಸೇವೆ ಸಲ್ಲಿಸಿ ಕೊಡಗು ರಂಗಭೂಮಿಯನ್ನು ಕರ್ನಾಟಕ ರಂಗಭೂಮಿಯಲ್ಲಿ ಗುರುತಿಸುವಂತೆ ಮಾಡಿದ್ದಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ನೀನಾಸಂ ಪದವೀಧರೆಯಾದ ಇವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ನಾಟಕ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮೈಸೂರು ದಕ್ಷಿಣ ವಲಯ ದಕ್ಷಿಣ ಕೇಸರಿ ಪ್ರಶಸ್ತಿಗಳು ಸಂದಿವೆ.

ಸುಮಾರು 80ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಇವರು ಕೊಡವ ಭಾಷೆಯ ಚಲನಚಿತ್ರಗಳಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಇವರು ನಟಿಸಿದ `ಬದ್‍ಕ್’ (ಕೊಡವ) ಕನ್ನಡದಲ್ಲಿ `ಮಿಥುನ’ ನಾಟಕದ ನಟನೆ ತೀವ್ರ ಗಮನ ಸೆಳೆದಿತ್ತು. ಇವರ ಪತಿ ಅಡ್ಡಂಡ ಸಿ ಕಾರ್ಯಪ್ಪ ಪ್ರತಿಷ್ಠಿತ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದು, ಮಗ ಪೊನ್ನಪ್ಪ ನ್ಯೂಜಿಲ್ಯಾಂಡಿನಲ್ಲಿ ಪ್ರವಾಸೋದ್ಯಮದಲ್ಲಿ ಉದ್ಯೋಗದಲ್ಲಿದ್ದಾರೆ. ಪೊನ್ನಂಪೇಟೆಯಲ್ಲಿ ನೆಲೆಸಿರುವ ಅನಿತಾ ಮನೆಯನ್ನೇ ರಂಗಭೂಮಿ ಕಾರ್ಯಕ್ಷೇತ್ರವನ್ನಾಗಿಸಿ ದುಡಿಯುತ್ತಿದ್ದಾರೆ.

Translate »