ಗೋಣಿಕೊಪ್ಪಲಿನಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಹೊರತುಪಡಿಸಿ ಬಜೆಟ್‍ನಲ್ಲಿ ಕೊಡಗು ಸಂಪೂರ್ಣ ಕಡೆಗಣನೆ
ಕೊಡಗು

ಗೋಣಿಕೊಪ್ಪಲಿನಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಹೊರತುಪಡಿಸಿ ಬಜೆಟ್‍ನಲ್ಲಿ ಕೊಡಗು ಸಂಪೂರ್ಣ ಕಡೆಗಣನೆ

March 6, 2020

ಮಡಿಕೇರಿ, ಮಾ.5- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ಮೇಲ್ನೋಟಕ್ಕೆ ರೈತ ಪರವಾಗಿದೆ ಎನ್ನು ವಂತಿದೆ. ಕೃಷಿಕ ವರ್ಗಕ್ಕೆ ಸಾಕಷ್ಟು ಯೋಜನೆ ಗಳನ್ನು ಯಡಿಯೂರಪ್ಪ ಪ್ರಕಟಿಸಿದ್ದಾರೆ. 2 ಲಕ್ಷ 37 ಸಾವಿರದ 893 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿದ ಸಿಎಂ ಯಡಿ ಯೂರಪ್ಪ, ಈ ಬಜೆಟ್‍ನಲ್ಲಿ ಜಿಲ್ಲಾವಾರು ಯೋಜನೆ ಬದಲಿಗೆ ವಿವಿಧ ಇಲಾಖೆಗಳ ಯೋಜನೆಗೆ ಒತ್ತು ನೀಡಿದ್ದಾರೆ. ಆದರೆ ಕೊಡಗು ಜಿಲ್ಲೆಯ ಜನರ ಬೇಡಿಕೆಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂಬುದು ಬಜೆಟ್ ಅಂಕಿ ಅಂಶಗಳಿಂದ ಕಂಡು ಬರುತ್ತಿದೆ.

ದಕ್ಷಿಣ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನೂತನ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಇದನ್ನು ಹೊರತು ಪಡಿಸಿದರೆ ಕೊಡಗು ಜಿಲ್ಲೆಗೆ ಮಹತ್ವದ ಕೊಡುಗೆಯನ್ನು ರಾಜ್ಯ ಬಜೆಟ್‍ನಲ್ಲಿ ನೀಡ ಲಾಗಿಲ್ಲ. ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಯಾಗಿದ್ದರೂ ಈ ಜಿಲ್ಲೆಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನವಿದ್ದಾಗಲೇ ಇದೀಗ ಬಜೆಟ್‍ನಲ್ಲಿಯೂ ಕೊಡಗನ್ನು ನಿರ್ಲಕ್ಷಿಸಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.

ಎರಡು ವರ್ಷಗಳಿಂದ ನಿರಂತರ ಪ್ರಕೃತಿ ವಿಕೋಪ ಪೀಡಿತವಾಗಿರುವ ಕೊಡಗು ಜಿಲ್ಲೆಗೆ ಸ್ಪೆಷಲ್ ಪ್ಯಾಕೇಜ್ ದೊರಕಬಹುದು ಎಂಬ ಜಿಲ್ಲೆಯ ಜನರ ನಂಬಿಕೆಯೂ ಹುಸಿಯಾಗಿದೆ. ಮೈಸೂರು – ಕುಶಾಲನಗರ ರೈಲು ಮಾರ್ಗಕ್ಕೆ ಜಮೀನು ನೀಡಿಕೆ, ರಾಜ್ಯ ಸರ್ಕಾರದ ಪಾಲು ಅನುದಾನ ಕೂಡ ಬಜೆಟ್‍ನಲ್ಲಿ ಪ್ರಸ್ತಾಪವಾಗಿಲ್ಲ. ಕಾಡಾನೆ ದಾಂಧಲೆಗೆ ಕಡಿವಾಣ ಹಾಕುವ ಬಗ್ಗೆ ಈ ಹಿಂದೆಯೇ ಸರಕಾರದ ಮೇಲೆ ವಿವಿಧ ಸಂಘ ಸಂಸ್ಥೆಗಳು ಒತ್ತಡ ಹೇರಿದ್ದರೂ ಕೂಡ ಮುಖ್ಯಮಂತ್ರಿ ಗಳು ಈ ಕುರಿತು ಎಲ್ಲಿಯೂ ಪ್ರಸ್ತಾಪಿಸಿಲ್ಲ.

ಹೀಗಾಗಿ ಕಾಡಾನೆ ಹಾವಳಿ, ಹುಲಿ, ಚಿರತೆ ಹಾವಳಿಯಿಂದ ಜನ ಜಾನುವಾರುಗಳು, ಫಸಲು ನಷ್ಟ ಎದುರಿಸುತ್ತಿರುವವರು ತೀವ್ರ ಹತಾಶರಾಗಿ ದ್ದಾರೆ. ವನ್ಯಜೀವಿ ಮಾನವ ಸಂಘರ್ಷದ ಪರಿಹಾರ ಮೊತ್ತ ಹೆಚ್ಚಳ, ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಹಾಗೂ ಮೇಲ್ದರ್ಜೆ ಸೇರಿದಂತೆ ಭೂಕುಸಿತ ಮತ್ತು ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳೂ ಪ್ರಕಟವಾಗಿಲ್ಲ. ಕೊಡಗಿನ ಬಗ್ಗೆ ಚಕಾರವೇ ಬಜೆಟ್‍ನಲ್ಲಿ ಇಲ್ಲದಿರುವುದು ಸಾಕಷ್ಟು ಟೀಕೆ, ಅಸಮಾಧಾನಗಳಿಗೆ ಕಾರಣವಾಗಿದೆ. ರಾಜ್ಯದ ಆರ್ಥಿಕ ದುಸ್ಥಿತಿಯ ಕರಿಛಾಯೆ ಮುಂಗಡ ಪತ್ರದಲ್ಲಿಯೂ ಕಂಡು ಬಂದಂತಿದೆ ಎಂಬ ಮಾತು ಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಕೊಡಗಿಗೆ ಏನನ್ನೂ ನೀಡದ ರಾಜ್ಯ ಬಜೆಟ್ ನಿರಾಶೆಯ ಕಾರ್ಮೋಡ ಕವಿಯುವಂತೆ ಮಾಡಿದೆ.

Translate »