ಬೆಳಿಗ್ಗೆ ಮಾಡಿದ ಮನವಿಗೆ ಸಂಜೆಯೇ ಸಿಕ್ಕಿತು ಸೌಲಭ್ಯ
ಚಾಮರಾಜನಗರ

ಬೆಳಿಗ್ಗೆ ಮಾಡಿದ ಮನವಿಗೆ ಸಂಜೆಯೇ ಸಿಕ್ಕಿತು ಸೌಲಭ್ಯ

March 6, 2020

ಅಹವಾಲು ಸಲ್ಲಿಸಲು ಬಂದ ವಿಕಲಚೇತನರೊಬ್ಬರ ಅಳಲಿಗೆ ದೊರೆಯಿತು
ಪರಿಹಾರ, ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
ಚಾಮರಾಜನಗರ, ಮಾ.5- ಸಾಧನ-ಸಲಕರಣೆ ಗಳ ಸೌಲಭ್ಯ ಬಯಸಿ ಬೆಳಿಗ್ಗೆ ಮನವಿ ಸಲ್ಲಿಸಲು ದೂರದ ಊರಿನಿಂದ ಬಂದ ವಿಕಲಚೇತನರೊಬ್ಬ ರಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಸಂಜೆಯೊಳಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬುಧವಾರ ಬೆಳಿಗ್ಗೆ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ಬಳಿ ಮನವಿ ಸಲ್ಲಿಸಲು ಗುಂಡ್ಲುಪೇಟೆ ತಾಲೂಕಿನ ದೊಡ್ಡಆಲತ್ತೂರು ಗ್ರಾಮದ ನಿವಾಸಿ ಶ್ರೀನಿವಾಸಾಚಾರಿ ಕಾದು ಕುಳಿತಿದ್ದರು. ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರವೇಶ ದ್ವಾರಕ್ಕೆ ಕಾರಿನಲ್ಲಿ ಬಂದಿಳಿಯುತ್ತಿದಂತೆ ವಿಕಲಚೇತನನನ್ನು ಕಂಡು ಮಾತನಾಡಿಸಿದರು.

ಈ ವೇಳೆ ಶ್ರೀನಿವಾಸಾಚಾರಿ ತಾನು ಕಟ್ಟಡ ಕೆಲಸಗಾರ. ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಆಕಸ್ಮಿಕವಾಗಿ ಬಿದ್ದು ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದುದಾಗಿಯೂ, ಅದಕ್ಕಾಗಿ ಸಾಧನ- ಸಲಕರಣೆಗಳ ಸೌಲಭ್ಯ ಕೋರಲು ಬಂದಿರುವು ದಾಗಿ ತನ್ನ ಅಳಲು ತೋಡಿಕೊಂಡರು.

ಶ್ರೀನಿವಾಸಾಚಾರಿ ಅಹವಾಲು ಆಲಿಸಿದ ಜಿಲ್ಲಾಧಿ ಕಾರಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ತಮ್ಮ ಡ್ರೈವರ್‍ಗೆ ಹಣ ನೀಡಿ, ಉಪಹಾರ ಕೊಡಿಸಲು ತಿಳಿಸಿದರು. ಆ ನಂತರ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ಕರೆಯಿಸಿ ಶ್ರೀನಿವಾಸಾಚಾರಿ ಬಗೆಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬಳಿಕ ಶ್ರೀನಿವಾಸಾ ಚಾರಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ, ವೈದ್ಯರಿಂದ ತಪಾಸಣೆಗೆ ಒಳಪಡಿಸಿ ಅವರ ಸಮಸ್ಯೆಗಳನ್ನು ತಿಳಿದರು.

ವೈದ್ಯಕೀಯ ಶಿಫಾರಸ್ಸು, ದಾಖಲೆಗಳನ್ನು ತುರ್ತಾಗಿ ಪಡೆದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಶ್ರೀನಿವಾಸಾ ಚಾರಿ ಅವರಿಗೆ ಅವಶ್ಯಕವಾದ ಸಾಧನ-ಸಲಕರಣೆ ಗಳನ್ನು ತಕ್ಷಣವೇ ನೀಡಲು ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶ್ರೀನಿವಾಸ ಚಾರಿ ಶ್ರವಣದೋಷದಿಂದ ಕೂಡ ಬಳಲುತ್ತಿರುವುದು ತಿಳಿದುಬಂದಿತು. ಮಧ್ಯಾಹ್ನದ ವೇಳೆಗೆ ಶ್ರೀನಿವಾಸಾ ಚಾರಿ ಅವರಿಗೆ ಅವಶ್ಯವಿರುವ ಸಾಧನ-ಸಲಕರಣೆ ಗಳಾದ ಕಂಕುಳ ದೊಣ್ಣೆ, ಶ್ರವಣ ಸಾಧನ ಹಾಗೂ ಓಡಾಟಕ್ಕೆ ಅನುಕೂಲವಾಗಲೆಂದು ತ್ರಿಚಕ್ರ ವಾಹನ ವಿತರಿಸಿದರು. ಅಷ್ಟೇ ಅಲ್ಲದೇ ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಶ್ರೀನಿವಾಸಚಾರಿ ಅವರಿಗೆ ವಿಕಲಚೇತನ ಹೆಚ್ಚುವರಿ ಪಿಂಚಣಿ ಶೀಘ್ರ ಮಂಜೂರು ಆಗಬೇಕೆಂದು ನಿರ್ದೇಶನ ನೀಡಿದರು.
ಸಂಕಷ್ಟದಲ್ಲಿರುವ ವಿಶೇಷಚೇತನ ಬಂಧುವಿನ ದುಃಖ-ದುಮ್ಮಾನಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ನೆರವು ಕಲ್ಪಿಸಿ ಮಾನವೀಯತೆ ಮೆರೆದ ಜಿಲ್ಲಾ ಧಿಕಾರಿ ಡಾ.ಎಂ.ಆರ್.ರವಿ ಮಾದರಿಯಾಗಿದ್ದಾರೆ.

Translate »