ಚಾಮರಾಜನಗರ, ಮಾ.5(ಎಸ್‍ಎಸ್)- ಜಿಲ್ಲೆಯಲ್ಲಿ ತಮಿಳುನಾಡಿನ ಬೋರ್‍ವೆಲ್ ಲಾರಿಗಳ ದಂಧೆ ನಿಲ್ಲಿಸುವಂತೆ ಆಗ್ರಹಿಸಿ ಹಾಗೂ ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿದರು. ಬಳಿಕ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಾ.ನಗರ ಜಿಲ್ಲೆಯಲ್ಲಿ ನೆರೆಯ ರಾಜ್ಯ ತಮಿಳು ನಾಡಿನ ರಿಜಿಸ್ಟ್ರೇಷನ್(ಟಿಎನ್) ಬೋರ್‍ವೆಲ್ ಲಾರಿ ಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೇಸಿಂಗ್ ಪೈಪ್ ಮಾರುಕಟ್ಟೆಯಲ್ಲಿ 20 ಅಡಿಗೆ 1550 ರೂ. ಇದೆ. ಆದರೆ ತಮಿಳುನಾಡಿನ ಬೋರ್ ವೆಲ್ ಲಾರಿ ಮಾಲೀಕರು ರೈತರಿಂದ 7 ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 300 ಅಡಿಯಿಂದ ಪ್ರತಿ ನೂರು ಅಡಿಗೆ ದರವನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ. ಅಲ್ಲದೇ ವೆಲ್ಡಿಂಗ್ ಚಾರ್ಜ್, ಬ್ಯಾಟ, ಟ್ರಾನ್ಸ್ ಪೋರ್ಟ್ ಚಾರ್ಜ್ ಎಂದು ಹೇಳಿ ದುಬಾರಿ ಹಣ ಪಡೆಯುತ್ತಿದ್ದಾರೆ. ಈ ಮೂಲಕ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಜಿಎಸ್‍ಟಿ ಬಿಲ್ ನೀಡದೇ ಸರ್ಕಾರಕ್ಕೆ ವಂಚಿಸಲಾಗುತ್ತಿದೆ. ಹೀಗಾಗಿ ಕೂಡಲೇ ಬೋರ್‍ವೆಲ್ ಲಾರಿಗಳಿಗೆ ಅಡಿಗೆ ಇಂತಿಷ್ಟು ಹಣ ಎಂದು ದರವನ್ನು ನಿಗದಿಗೊಳಿಸುವಂತೆ ಒತ್ತಾಯಿ ಸಿದರು. ಇದೇ ವೇಳೆ ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್, ಕಾರ್ಯಾ ಧ್ಯಕ್ಷ ಮಹದೇವಪ್ಪ, ತಾ.ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಕುಮಾರ, ಮುಖಂಡರಾದ ಬಸವಣ್ಣ, ಮಹೇಶ್, ಗುರು, ಶಿವಕುಮಾರ್, ಬೆಳ್ಳಶೆಟ್ಟಿ, ಪೃಥ್ವಿ ಸೇರಿದಂತೆ ಇನ್ನಿತರರಿದ್ದರು.