ರಾಜ್ಯ ಬಜೆಟ್: ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಹೆಸರೇ ಪ್ರಸ್ತಾಪವಿಲ್ಲ
ಚಾಮರಾಜನಗರ

ರಾಜ್ಯ ಬಜೆಟ್: ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಹೆಸರೇ ಪ್ರಸ್ತಾಪವಿಲ್ಲ

March 6, 2020

ಚಾಮರಾಜನಗರ, ಮಾ.5- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ಗಡಿಜಿಲ್ಲೆ ಚಾಮರಾಜನಗರಕ್ಕೆ ವಿಶೇಷ ಅನುದಾನವಿರಲಿ, ಜಿಲ್ಲೆಯ ಹೆಸರೇ ಪ್ರಸ್ತಾಪ ಮಾಡದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದ್ದು, ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಮುಖ್ಯಮಂತ್ರಿಗಳು ಮಂಡಿಸಿದ 2020-21ನೇ ಸಾಲಿನ ಬಜೆಟ್‍ನಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗ ಲಿದೆ. ಹೊಸ-ಹೊಸ ಯೋಜನೆಗಳು ಜಾರಿಯಾಗಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಯಾಗಲಿದೆ. ಕೈಗಾರಿಕೆಗಳು ಸ್ಥಾಪನೆ ಗೊಂಡು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂಬ ನಿರೀಕ್ಷೆಯನ್ನು ಜಿಲ್ಲೆ ಜನರು ಇಟ್ಟುಕೊಂಡಿದ್ದರು. ಈ ಎಲ್ಲಾ ನಿರೀಕ್ಷೆ ಗಳು ಇದೀಗ ಹುಸಿಯಾಗಿವೆ.

ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ಬಳಿ ನಿರ್ಮಿಸಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ, ಚಾಮರಾಜನಗರಕ್ಕೆ 2ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಇನ್ನಿತರ ಯೋಜನೆ ಗಳಿಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‍ನಲ್ಲಿ ವಿಶೇಷ ಅನುದಾನ ಬಿಡು ಗಡೆಯಾಗಲಿದೆ ಎಂದು ಜಿಲ್ಲೆಯ ಜನಪ್ರತಿ ನಿಧಿಗಳು ಹಾಗೂ ನಾಗರಿಕರು ಆಶಾಭಾವನೆ ಹೊಂದಿದ್ದರು. ಆದರೆ ಮುಖ್ಯಮಂತ್ರಿಗಳು ಒಂದೂ ಮುಕ್ಕಾಲು ಗಂಟೆಗಳ ಕಾಲ ಮಂಡಿ ಸಿದ ಬಜೆಟ್‍ನಲ್ಲಿ ಒಮ್ಮೆಯೂ ಚಾಮರಾಜ ನಗರ ಜಿಲ್ಲೆಯ ಹೆಸರನ್ನು ಪ್ರಸ್ತಾಪಿಸಲಿಲ್ಲ. ಇದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಮಂಡಿಸಿದ ಬಜೆಟ್ ಬಗ್ಗೆ ಪ್ರತಿ ಕ್ರಿಯಿಸಿರುವ ಹಲವು ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು, ಜಿಲ್ಲೆಯ ಪಾಲಿಗೆ ಈ ಬಾರಿಯ ಬಜೆಟ್ ಕೊಡುಗೆ ಏನೇನು ಇಲ್ಲ. ಇದರಿಂದ ಈ ಬಜೆಟ್ ಅನ್ನು ನಾವು ತಿರಸ್ಕರಿಸುವುದಾಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣ ಗಳಿವೆ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್‍ನಲ್ಲಿ 500 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಹಣದಲ್ಲಿ ಜಿಲ್ಲೆಗೆ ಅನುದಾನ ಬರುವ ನಿರೀಕ್ಷೆ ಇದೆ. ಇದನ್ನು ಹೊರತು ಪಡಿಸಿದರೇ, ಬೇರೆ ಯಾವುದೇ ರೀತಿಯ ವಿಶೇಷ ಅನು ದಾನದ ಬಗ್ಗೆ ಪ್ರಸ್ತಾಪವಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಶೇಷವಾಗಿ ಆಸಕ್ತಿ ವಹಿಸಿದರೇ ಮಾತ್ರ ಬಜೆಟ್‍ನಲ್ಲಿ ಪ್ರಸ್ತಾಪಿಸಿರುವ ಯೋಜನೆ ಗಳಲ್ಲಿ ಜಿಲ್ಲೆಗೆ ಅನುದಾನ ಬರಲಿದೆ. ಇದರಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿದ್ದಲಿಂಗಸ್ವಾಮಿ

Translate »