ಅನಾಥ ಶವಗಳ ಮುಕ್ತಿದಾಯಕ ಆಟೋ ಚಾಲಕ ಹಸನಬ್ಬ ನಿಧನ
ಕೊಡಗು

ಅನಾಥ ಶವಗಳ ಮುಕ್ತಿದಾಯಕ ಆಟೋ ಚಾಲಕ ಹಸನಬ್ಬ ನಿಧನ

April 9, 2020

ಸೋಮವಾರಪೇಟೆ, ಏ.8- ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಾವಿ, ಹೊಳೆ, ಕೆರೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಮೃತ ದೇಹ ಇದ್ದರೆ ಆ ಸ್ಥಳಕ್ಕೆ ಹಾಜರಾಗುತ್ತಿದ್ದ ಅನಾಥ ಶವ ಮುಕ್ತಿ ದಾಯಕ ಆಟೋ ಚಾಲಕ ಹಸನಬ್ಬ (62) ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಆಲೆಕಟ್ಟೆ ರಸ್ತೆಯ ಕಬರಸ್ಥಾನದಲ್ಲಿ ನಡೆಯಲಿದೆ. ನಗರದ ಮಹದೇಶ್ವರ ಬ್ಲಾಕಿನ ಜನಾಬ್ ಅಬ್ದುಲ್ ಖಾದರ್ ಹಾಗೂ ಅಮ್ಮವ್ವ ದಂಪತಿಗಳ ಪುತ್ರ ಹಸನಬ್ಬ ಸ್ಥಳೀಯ ಜೂನಿಯರ್ ಕಾಲೇಜಿ ನಲ್ಲಿ ಪಿಯುಸಿ ಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ, ಆರ್ಥಿಕ ತೊಂದರೆ ಯಿಂದ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಜೀವನ ನಿರ್ವಹಣೆಗೆ ಆಟೋ ಡ್ರೈವರ್ ಆಗಿದ್ದರು.

ನಗರದಲ್ಲಿ ಅನಾಥ ಶವ ಕಂಡುಬಂದರೆ, ಅವುಗಳನ್ನು ತನ್ನ ಆಟೋದಲ್ಲಿ ಶವಗಾರಕ್ಕೆ ಸಾಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಬಾವಿಯಲ್ಲಿ ಕಂಡು ಬರುವ ಕೊಳೆತ ಶವಗಳನ್ನು ಯಾವುದೇ ಮುಜುಗರವಿಲ್ಲದೇ ಮೇಲೆತ್ತುತ್ತಾರೆ. ಅಪಾಯದ ಅರಿವಿದ್ದರೂ ಕೂಡ ಆ ಕೆಲಸವನ್ನು ಕೊನೆವರೆಗೂ ಮುಂದುವರಿಸಿಕೊಂಡು ಬರುತ್ತಿದ್ದರು. ಇಲ್ಲಿಯವರೆಗೆ ನೂರಾರು ಅನಾಥ ಶವಗಳನ್ನು ಇತರ ಆಟೋ ಚಾಲಕರು ಮತ್ತು ಸಂಘ ಸಂಸ್ಥೇಗಳ ಸಹಕಾರವನ್ನು ಪಡೆದು ಶವಸಂಸ್ಕಾರವನ್ನೂ ಮಾಡಿದ್ದಾರೆ.

ಎಲ್ಲಾ ಜನಾಂಗದವರೊಂದಿಗೆ ಬೆರೆಯುತ್ತಿದ್ದ ಹಸನಬ್ಬ, ಇಲ್ಲಿನ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅದ್ಧೂರಿ ಗೌರಿ-ಗಣೇಶೋತ್ಸವನ್ನು ಆಚರಿಸಿದ ಕೀರ್ತಿಯೂ ಇವರಿಗಿದೆ. ನಗರದ ಜಲಾಲಿಯ ಮಸೀದಿಯ ಕಾರ್ಯದರ್ಶಿ ಯಾಗಿ, ಸಾರ್ವಜನಿಕ ಆಸ್ಪತ್ರೆ ಸಂದರ್ಶಕ ಸಮಿತಿ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಇವರ ಸಮಾಜಸೇವೆಯನ್ನು ಗುರುತಿಸಿದ ಇಲ್ಲಿನ ರೋಟರಿ ಸಂಸ್ಥೆ, ವಾಹನ ಚಾಲಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

Translate »