ಆಯುಧ ಪೂಜಾ ರೋಲ್‍ಕಾಲ್ ತಪ್ಪಿಸಿ!?
ಮೈಸೂರು

ಆಯುಧ ಪೂಜಾ ರೋಲ್‍ಕಾಲ್ ತಪ್ಪಿಸಿ!?

November 25, 2020

ಎಸ್ಪಿಗೆ ಜಿಲ್ಲಾ ಉಸ್ತುವಾರಿ ಸಚಿವರ ತಾಕೀತು

ರೆಸಾರ್ಟ್‍ನ ಕಳವು ಪ್ರಕರಣದಲ್ಲಿ ಅದರ ಮಾಲೀಕನಿಗೆ ಕಿರುಕುಳ ಆರೋಪ

ಮೈಸೂರು, ನ.24(ಆರ್‍ಕೆ)-ರೆಸಾರ್ಟ್‍ವೊಂದರಲ್ಲಿ ತಂಗಿದ್ದವರ ಚಿನ್ನಾಭರಣ ಕಳವು ಪ್ರಕರಣ ಸಂಬಂಧ ಅದರ ಮಾಲೀಕರಿಗೆ ಕಿರುಕುಳ ನೀಡಿ, ಆಯುಧ ಪೂಜಾ ಹೆಸರಲ್ಲಿ ರೋಲ್‍ಕಾಲ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಎಸ್ಪಿ ಸಿ.ಬಿ.ರಿಷ್ಯಂತ್ ಅವರಿಗೆ ಸೂಚಿಸಿದರು.

ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವರು, ರೆಸಾರ್ಟ್‍ನಲ್ಲಿ ತಂಗಿದ್ದವರ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ಕಳವಾದರೆ, ರೆಸಾರ್ಟ್ ಮಾಲೀಕನನ್ನು ಕರೆದೊಯ್ದು ಕೂರಿಸಿಕೊಂಡು ಕಿರುಕುಳ ನೀಡಿದ್ದಲ್ಲದೆ, ಆಯುಧ ಪೂಜಾ ಹೆಸರಲ್ಲಿ ಪೊಲೀಸರು ರೋಲ್‍ಕಾಲ್ ಮಾಡುತ್ತಾ ರೆಂದರೆ, ವ್ಯವಸ್ಥೆ ಎಲ್ಲಿಗೆ ಹೋಗಿದೆ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುವ ಬದಲು ರೆಸಾರ್ಟ್ ಮಾಲೀಕರನ್ನೇ ಕರೆದೊಯ್ದು ಗಂಟೆಗಟ್ಟಲೆ ಕೂರಿಸಿಕೊಂಡು ತೊಂದರೆ ನೀಡುವುದು ಸರಿಯಲ್ಲ ಎಂದರು. ನಾವು ಪ್ರಕರಣವನ್ನು ಭೇದಿಸಿ ಆರೋಪಿಯನ್ನೂ ಬಂಧಿಸಿದ್ದೇವೆ. ಅಲ್ಲದೆ ರೆಸಾರ್ಟ್ ಮಾಲೀಕರನ್ನು ಠಾಣೆಗೆ ಕರೆತಂದಿರಲಿಲ್ಲ. ಆದರೂ ಈ ಕುರಿತು ಪರಿಶೀಲಿಸುತ್ತೇನೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದರು.

ವಿದ್ಯುತ್ ಅಲಂಕಾರಕ್ಕೆ ಶ್ಲಾಘನೆ: ದಸರಾ ಸರಳವಾದರೂ, ವಿದ್ಯುತ್ ಅಲಂಕಾರ ಸುಂದರ ವಾಗಿತ್ತು ಎಂದು ಬಹಳಷ್ಟು ಮಂದಿ ಹೇಳಿದರು. ಅದಕ್ಕಾಗಿ ಚೆಸ್ಕಾಂ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಹೇಳುವ ಮೂಲಕ ಸಚಿವ ಸೋಮಶೇಖರ್ ಪ್ರಶಂಸಿಸಿದರು.

ಬಿಜೆಪಿಯಲ್ಲಿ ಒಂದೇ ಟೀಂ: ಎಸ್‍ಟಿಎಸ್
ಮೈಸೂರು,ನ.24(ಆರ್‍ಕೆ)-ಬಿಜೆಪಿಯಲ್ಲಿ ಬಾಂಬೆ ಟೀಂ, ಹಳಬರ ಟೀಂ, ವಲಸಿಗರ ಟೀಂ ಎಂಬುದಿಲ್ಲ. ನಾವೆಲ್ಲರೂ ಒಂದೇ ಟೀಂನಲ್ಲಿದ್ದು ಒಗ್ಗಟ್ಟಿನಿಂದಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗ ಎಂಬುದಿಲ್ಲ. ಯಾರೋ ಒಂದಿಬ್ಬರು ನಾವೇ ಲೀಡರ್ಸ್ ಎಂದು ಶೋ ಕೊಟ್ಟುಕೊಂಡು ಓಡಾಡಿದರೆ ಅದರಿಂದ ಯಾವ ಪ್ರಯೋಜನವಿಲ್ಲ. ಮಾತು ಕೊಟ್ಟಂತೆ ಎಲ್ಲವೂ ನಡೆಯುತ್ತಿದೆ ಎಂದರು.

ಉಪಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿ ಮಾಡಿದ್ದಾರೆ. ಸೋತವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಂಘಟನೆಗಾಗಿ ಸಭೆ ಮಾಡಿದ್ದಾರೆ. ಅದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಅದು ಕೇವಲ ಊಹಾ ಪೋಹ. ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಪಕ್ಷ ಹೆಚ್ಚು ಒತ್ತು ನೀಡುತ್ತಿದೆ. ಈ ಸಂಬಂಧ ವಿಭಾಗವಾರು ಉಸ್ತುವಾರಿಗಳನ್ನು ನೇಮಿಸಲಾಗಿದೆ. ಮೈಸೂರಿಗೆ ಆರ್.ಅಶೋಕ್ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದರು.

ನಮ್ಮ ಬಾಂಬೆ ಟೀಂನಲ್ಲಿ ರೋಷನ್ ಬೇಗ್ ಇರಲಿಲ್ಲ. ಬಿಜೆಪಿ ನಂಬಿಕೊಂಡು ಅವರು ರಾಜೀನಾಮೆ ಕೊಟ್ಟವರಲ್ಲ. ಅವರು ಕೇಳಿದ್ದರೆ ಶಿವಾಜಿನಗರದಿಂದ ಟಿಕೆಟ್ ಕೊಡುತ್ತಿದ್ದರು. ಬೇಗ್ ಅವರು ನಮ್ಮ ಟೀಂನೊಂದಿಗೆ ಹೊರಗೆ ಬಂದವರಲ್ಲ. ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತು ಹೊರಗಡೆ ಬಂದರು. ಐಎಂಎ ಪ್ರಕರಣದ ವಿಚಾರಣೆ ನಡೆಯುತ್ತಿದೆಯಾದರೂ, ಅವರ ಪಾತ್ರ ಇಲ್ಲ ಎನ್ನುವುದಾದರೆ ಕ್ಲೀನ್ ಚಿಟ್ ಪಡೆದು ಹೊರಬರುತ್ತಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಸಹಕಾರ ಸಂಘಗಳ ಮೂಲಕ ರಾಜ್ಯದಲ್ಲಿ ಜೂನ್ ಮಾಹೆಯೊಳಗಾಗಿ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆರ್ಥಿಕ ಸ್ಪಂದನ ಯೋಜನೆಗಳಡಿ ಒಟ್ಟು 39,300 ಕೋಟಿ ರೂ.ಗಳ ಸಾಲ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 24 ಲಕ್ಷ ರೈತ ರಿಗೆ 15,300 ಕೋಟಿ ರೂ. ಹೊಸ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.

ಗ್ರಾಪಂ ಚುನಾವಣೆ ನಂತರ ಅದಾಲತ್
ಮೈಸೂರು, ನ. 24(ಆರ್‍ಕೆ)- ಗ್ರಾಮ ಪಂಚಾಯ್ತಿ ಚುನಾವಣೆ ನಂತರ ಮೈಸೂರು ಜಿಲ್ಲೆಯಾದ್ಯಂತ ಸಾರ್ವಜನಿಕ ಕುಂದು-ಕೊರತೆ ಆಲಿಸಲು ಅದಾಲತ್ ನಡೆಸಲಾಗು ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದ ಅವರು, ಈ ಜನಸ್ನೇಹಿ ಅದಾಲತ್‍ಗೆ ಜಿಲ್ಲಾಡಳಿತದ ಎಲ್ಲಾ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಸಬೂಬು ಹೇಳುವಂತಿಲ್ಲ. ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅದಾಲತ್ ನಡೆಸಬೇಕು ಎಂದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನಡೆಯುವ ಅದಾಲತ್‍ನಲ್ಲಿ ಶಾಸಕರು ಅಧ್ಯಕ್ಷತೆ ವಹಿಸಲಿದ್ದು, ಕಂದಾಯ ಇಲಾಖೆ, ಚೆಸ್ಕಾಂ, ಮುಡಾ, ಪಾಲಿಕೆ, ಲೋಕೋಪಯೋಗಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ದೂರುಗಳು ಕೇಳಿ ಬಂದಲ್ಲಿ ಅದಾಲತ್‍ನಲ್ಲೇ ಸಮಸ್ಯೆಗೆ ಪರಿಹಾರ ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ದಾಖಲಾತಿಗಳೊಂದಿಗೆ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಅಗತ್ಯ ಸಲಹೆ, ಸೂಚನೆಗಳನ್ನು ಅಧೀನಾಧಿಕಾರಿಗಳಿಗೆ ನೀಡಬೇಕೆಂದು ಸಚಿವರು ತಿಳಿಸಿದರು.