ಜಿಲ್ಲೆಯಲ್ಲಿ ಕೋವಿಡ್ ಪ್ರಖರತೆ ಕ್ಷೀಣ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಸಮಾಧಾನ
ಮೈಸೂರು

ಜಿಲ್ಲೆಯಲ್ಲಿ ಕೋವಿಡ್ ಪ್ರಖರತೆ ಕ್ಷೀಣ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಸಮಾಧಾನ

November 25, 2020

ಮೈಸೂರು, ನ.24(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಖರತೆ ಕ್ಷೀಣಿಸಿರುವುದು ಶ್ಲಾಘನೀಯ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲೆಯಲ್ಲಿ ಕೇವಲ 626 ಕೋವಿಡ್ ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ ಅವರಿಂದ ಮಾಹಿತಿ ಪಡೆದು, ಜಿಲ್ಲಾ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಪ್ರತಿ ನಿತ್ಯ ಜಿಲ್ಲೆಯಲ್ಲಿ 4,000 ಆರ್‍ಟಿಪಿಸಿಆರ್ ಟೆಸ್ಟ್ ಮಾಡುತ್ತಿರುವುದರಿಂದ ಸೋಂಕಿತರನ್ನು ಐಸೋಲೇಷನ್‍ನಲ್ಲಿಡುತ್ತಿರುವ ಕಾರಣ ಕೊರೊನಾ ವೈರಸ್ ಹರಡುವುದು ಕಡಿಮೆಯಾಗಿದೆ. ಈಗ ವೈರಸ್ ಅನ್ನು ನಿಯಂತ್ರಿಸುವುದು ಬಲು ಸುಲಭ ಎಂದೂ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚಿಸಬೇಕು. ಹೋಬಳಿ ಮತ್ತು ತಾಲೂಕು ಜನರಲ್ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಪ್ರತಿಯೊಬ್ಬರೂ ಕೆ.ಆರ್.ಆಸ್ಪತ್ರೆಗೆ ಬರುವುದನ್ನು ತಪ್ಪಿಸಿ ಎಂದು ಶಾಸಕ ಜಿ.ಟಿ.ದೇವೇಗೌಡರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕೋವಿಡ್ ಕೇರ್ ಸೆಂಟರ್ ಆಗಿ ಮಾಡಬೇಕೆಂದಿದ್ದ ಕೆಆರ್‍ಎಸ್ ರಸ್ತೆಯ ಟ್ರಾಮಾ ಕೇರ್ ಸೆಂಟರ್ ಅನ್ನು ಇದೀಗ ಕೋವಿಡ್ ಪ್ರಕರಣ ಕಡಿಮೆಯಾಗಿರುವುದರಿಂದ ಟ್ರಾಮಾ ಕೇರ್ ಉದ್ದೇಶಕ್ಕೇ ಬಳಸಲು ನಿರ್ಧರಿಸಿದ್ದೇವೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದರು. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಸೇರಿದಂತೆ ವಿವಿಧೆಡೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಬಗ್ಗೆ, ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕ ಹಾಗೂ ಇನ್ನಿತರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಮುಂದಿನ ವಾರ ಸಚಿವ ಡಾ.ಸುಧಾಕರ್ ಅವರನ್ನು ಮೈಸೂರಿಗೆ ಕರೆಸಿ ಸಭೆ ನಡೆಸುವುದಾಗಿಯೂ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

Translate »