ಕೆಸರೆಯ ಕಸಾಯಿಖಾನೆ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ
ಮೈಸೂರು

ಕೆಸರೆಯ ಕಸಾಯಿಖಾನೆ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ

November 25, 2020

ಮೈಸೂರು,ನ.24(ಆರ್‍ಕೆ)-ಮೈಸೂ ರಿನ ಕೆಸರೆಯಲ್ಲಿ ನಿರ್ಮಿಸಲು ಉದ್ದೇ ಶಿಸಿರುವ ಕಸಾಯಿಖಾನೆ ಕೆಲಸವನ್ನು ಸ್ಥಗಿತಗೊಳಿಸಿ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕರಾದ ಜಿ.ಟಿ. ದೇವೇಗೌಡ, ಎಲ್.ನಾಗೇಂದ್ರ, ಪಾಲಿಕೆ ಆಯುಕ್ತರಿಗೆ ತಾಕೀತು ಮಾಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಾಪ್ ಸಿಂಹ, ಸ್ಥಳೀಯರು, ಎಲ್ಲಾ ಸಮುದಾಯಗಳ ಪ್ರಮು ಖರೂ ತೀವ್ರ ವಿರೋಧ ಮಾಡುತ್ತಿದ್ದರೂ, ಕೆಸರೆಯಲ್ಲೇ ಕಸಾಯಿಖಾನೆ ಮಾಡ ಬೇಕೆಂಬ ಹಠವೇಕೇ ಎಂದು ಪ್ರಶ್ನಿಸಿದರು.

ಕೆಟ್ಟ ವಾಸನೆ ಹರಡಿ ಪರಿಸರ ಹಾಳಾ ಗುತ್ತದೆ ಎಂದು ಸ್ಥಳೀಯ ಸಂಘ-ಸಂಸ್ಥೆಗಳ ವರು ಕಳೆದ ಹಲವು ವರ್ಷಗಳಿಂದಲೂ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವೂ ಹಲವು ಸಭೆಗಳಲ್ಲಿ ಹೇಳಿದ್ದರೂ ನೀವು ಪದೇಪದೆ ಹೋಗಿ ಕೆಲಸ ಮಾಡು ತ್ತಿರುವ ಔಚಿತ್ಯವೇನು ಎಂದು ಸಂಸದ-ಶಾಸಕರಿಬ್ಬರೂ ಪ್ರಶ್ನಿಸುತ್ತಿದ್ದಂತೆಯೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ತಕ್ಷಣದಿಂದಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ, ರಾಯನ ಕೆರೆ ಅಥವಾ ಬೇರೆಡೆ ಜಾಗ ಹುಡುಕಿ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರಿಗೆ ತಾಕೀತು ಮಾಡಿದರು.

ಕಟ್ಟಡ ರಿಪೇರಿ ಮಾಡಿಸಿ: ಗ್ರಾಮಾಂತರ ಪ್ರದೇಶದಂತೆ ಮೈಸೂರು ನಗರದಲ್ಲೂ ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ ಗಳನ್ನು ರಿಪೇರಿ ಮಾಡಿಸಿ ಕುಡಿಯುವ ನೀರು, ಶೌಚಾಲಯದಂತಹ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಶಾಸಕ ನಾಗೇಂದ್ರ ಅವರು ಡಿಡಿಪಿಐ ಪಾಂಡು ರಂಗ ಅವರಿಗೆ ಸೂಚನೆ ನೀಡಿದರು.

ನರೇಗಾದಲ್ಲಿ ಕೆಲಸವಾಗುತ್ತಿಲ್ಲ: ಜಿಲ್ಲೆ ಯಾದ್ಯಂತ ನರೇಗಾ ಯೋಜನೆಯಡಿ ಯಾವುದೇ ಕೆಲಸವಾಗುತ್ತಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಬಳಸಿ ಕೊಂಡು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಅವಕಾಶವಿದ್ದರೂ ಅನುದಾನ ಬಳಕೆ ಯಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ತಾಳುತ್ತಿರುವುದು ಸರಿಯಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಆರೋಪಿಸಿದರು.

ಗ್ರಾಮಗಳ ಅಭಿವೃದ್ಧಿ: ಮೈಸೂರು ನಗರಕ್ಕೆ ಹೊಂದಿಕೊಂಡಂತಹ ಗ್ರಾಮ ಗಳಿಗೆ ಕುಡಿಯುವ ನೀರು, ಚರಂಡಿ, ರಸ್ತೆ ಸೌಲಭ್ಯ ಒದಗಿಸಲು ಮುಡಾ ಅಧಿಕಾರಿ ಗಳು ಹಿಂದೇಟು ಹಾಕುತ್ತಿರುವುದೇಕೇ ಎಂದು ಪ್ರಶ್ನಿಸಿದ ಜಿಟಿಡಿ ಅವರಿಗೆ, ಆ ರೀತಿಯ ಕಾಮಗಾರಿ ಕೈಗೊಳ್ಳಬಾರದೆಂದು 2019ರ ಮಾರ್ಚ್ 1ರಂದು ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ನೀಡಿರುವುದರಿಂದ ಸಮಸ್ಯೆ ಯಾಗಿದೆ. ಅದಕ್ಕೆ ತಿದ್ದುಪಡಿ ಆಗಬೇಕು ಎಂದು ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಪ್ರತಿಕ್ರಿಯೆ ನೀಡಿದರು. ಜಿಪಂ ಅಧ್ಯಕ್ಷೆ ಪರಿ ಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮ ಶೇಖರ್, ಶಾಸಕರಾದ ಬಿ.ಹರ್ಷವರ್ಧನ್, ಎಂ.ಅಶ್ವಿನ್‍ಕುಮಾರ್, ಅನಿಲ್ ಚಿಕ್ಕಮಾದು, ಹೆಚ್.ಪಿ.ಮಂಜುನಾಥ್, ಕೆ.ಮಹದೇವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಸಿಇಓ ಡಿ.ಭಾರತಿ, ಎಸ್‍ಪಿ ಸಿ.ಬಿ.ರಿಷ್ಯಂತ್, ಪಾಲಿಕೆ ಕಮೀಷನರ್ ಗುರುದತ್ತ ಹೆಗಡೆ, ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿ ಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

ಮೈಸೂರಿಗೆ ಮೂರನೇ ಮಹಾರಾಣಿ ಬೇಡ!?
ಮೈಸೂರು,ನ.24 (ಆರ್‍ಕೆ)-ಸಾಂಸ್ಕøತಿಕ ನಗರಿ ಮೈಸೂ ರಲ್ಲಿ ಮೂರನೇ ಮಹಾರಾಣಿ ಬೇಕಾಗಿಲ್ಲ ಎಂದು ಹುಣ ಸೂರು ಶಾಸಕ ಹೆಚ್.ಪಿ.ಮಂಜುನಾಥ್ ಅವರು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆಡಿಪಿ ಸಭೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೆದುರೇ ಕಿಡಿಕಾರಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂ ಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ತಡವಾಗಿ ಆಗಮಿಸಿದ ಮಂಜುನಾಥ್, ಏಕಾಏಕಿ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹರಿಹಾಯ್ದರು.

ಈಗಾಗಲೇ ಮೈಸೂರಿನಲ್ಲಿ ಪ್ರಮೋದಾದೇವಿ ಒಡೆ ಯರ್ ಹಾಗೂ ತ್ರಿಷಿಕಾ ಅವರು ಮಹಾರಾಣಿಯ ರಾಗಿದ್ದಾರೆ. ನೀವು ಮೂರನೇ ಮಹಾರಾಣಿಯಂತೆ ಮೆರೆಯಬೇಡಿ, ಅಧಿಕಾರಿಯಾಗಿ ಜನರ ಸಮಸ್ಯೆಗೆ ಸ್ಪಂದಿಸಿ. ಜನಪ್ರತಿನಿಧಿಗಳ ಮನವಿಗಳನ್ನು ಪರಿ ಗಣಿಸಿ ಕಾರ್ಯನಿರ್ವಹಿಸಿ ಎಂದು ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದರು.

ಹುಣಸೂರು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅಲ್ಲಿ ಮನೆಗಳಿಗೆ ಕೊಚ್ಚೆ ನೀರು ಸರಬರಾಜಾಗುತ್ತಿದೆ. ಎಷ್ಟು ಬಾರಿ ಹೇಳಿದರೂ ಅಧಿಕಾರಿಗಳು ನೆರವಿಗೆ ಬರು ತ್ತಿಲ್ಲ. ಕ್ಷೇತ್ರದಲ್ಲಿ 3 ತಿಂಗಳಾದರೆ ತಂಬಾಕು, ಶುಂಠಿ ಹಾಗೂ ಜೋಳ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆಂ ಬುದನ್ನು ಯೋಚಿಸಿದ್ದೀರಾ, ನಾಳೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆಯಾಗುತ್ತಾರೆ ಎಂದು ಶಾಸಕರು ಏರು ಧನಿಯಲ್ಲಿ ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಜನರು ಶಾಸಕನಾದ ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಿ ದ್ದಾರೆ. ನಾನು ಈ ಬಗ್ಗೆ ಹಲವು ಪತ್ರ ಬರೆದಿದ್ದರೂ ಜಿಲ್ಲಾ ಧಿಕಾರಿಗಳು ಒಂದಕ್ಕೂ ಪ್ರತಿಕ್ರಿಯಿಸಿಲ್ಲ. ನಗರಸಭೆಯಲ್ಲಿ ಅಧಿಕಾರಿಗಳಿಲ್ಲ, ಕಂದಾಯ ನಿರೀಕ್ಷಕರಿಲ್ಲ. ನಾನು ಬೇರೆ ಪಕ್ಷದವನೆಂಬ ಕಾರಣಕ್ಕಾಗಿ ನನ್ನ ಯಾವುದೇ ಮನವಿ ಪತ್ರಕ್ಕೆ ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡದಿರುವುದು ನನಗೆ ತುಂಬಾ ನೋವುಂಟಾಗಿದೆ ಎಂದು ಮಂಜುನಾಥ್ ಗಂಭೀರ ಆರೋಪ ಮಾಡಿದರು.

ಜಿಲ್ಲಾಧಿಕಾರಿಗಳು ಅವರದ್ದೇ ಆದ ಭ್ರಮಾ ಲೋಕದಲ್ಲಿ ದ್ದಾರೆ. ಇನ್ನಿತರ ಅಧಿಕಾರಿಗಳನ್ನು ಕೇಳಿದರೆ ಮೇಡಂ ಕಡತಗಳಿಗೆ ಸಹಿ ಮಾಡುತ್ತಿಲ್ಲ ಎಂದು ಹೇಳುತ್ತಾರೆ, ಯಾವುದೇ ಸಭೆ-ಸಮಾರಂಭ ವಾದರೂ ಆ ಭಾಗದ ಶಾಸಕನಾದ ನನಗೇ ತಿಳಿಸುವುದಿಲ್ಲ. ದಸರಾ ಆನೆಗಳು ಬರುವುದೇ ನಮ್ಮ ಕ್ಷೇತ್ರಗಳಿಂದ. ಈ ಹಿಂದೆ ನಡೆಯುತ್ತಿದ್ದಂತೆ ಸಾಂಪ್ರ ದಾಯಿಕ ಪೂಜಾ ವಿಧಿಗಳನ್ನು ನಡೆಸಲು ನಮಗೆ ಅವ ಕಾಶ ವಿಲ್ಲವೆಂದರೆ ನಾನೇಕೆ ಶಾಸಕನಾಗಿರ ಬೇಕೆಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಅವರು ಜಿಲ್ಲಾ ಧಿಕಾರಿ ರೋಹಿಣಿಸಿ ಸಿಂಧೂರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ
ತಕ್ಷಣ ಮಧ್ಯ ಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿಗಳು ಎಲ್ಲರ ಸಮಸ್ಯೆಗಳಿಗೂ ಸ್ಪಂದಿ ಸುತ್ತಿದ್ದಾರೆ. ಎಲ್ಲಾ ಕಡತಗಳನ್ನೂ ಅಟೆಂಡ್ ಮಾಡು ತ್ತಿದ್ದಾರೆ. ಕೋವಿಡ್-19 ಪರಿಸ್ಥಿತಿಯಿಂದಾಗಿ ಸ್ವಲ್ಪ ವಿಳಂಬ ವಾಗಿರಬಹುದು. ಅಷ್ಟು ಮಾತ್ರಕ್ಕೆ ನೀವು ಈ ರೀತಿ ಆರೋಪ ಮಾಡಿ ಮೈಸೂರು ಮಹಾರಾಣಿ ಎಂದೆಲ್ಲಾ ಮಾತನಾಡುವ ಅಗತ್ಯವಿಲ್ಲ. ನೀವು ವಿಷಯವನ್ನು ಪರ್ಸನಲ್ ಆಗಿ ತೆಗೆದುಕೊಂಡು ಮಾತನಾಡುತ್ತಿ ದ್ದೀರಿ, ಅಭಿವೃದ್ಧಿ ಕೆಲಸಗಳೇ ನಾಗಬೇಕೆಂಬುದನ್ನು ಹೇಳಿ, ಮಾಡುತ್ತಾರೆ. ಅದನ್ನು ಬಿಟ್ಟು ಈ ರೀತಿ ಜನರಲ್ ಆಗಿ ಆರೋಪಿಸಬೇಡಿ ಎಂದು ಜಿಲ್ಲಾಧಿ ಕಾರಿಗಳ ಪರ ಬ್ಯಾಟ್ ಮಾಡಿದರು.

ಅವರಿಗೆ ಸಾಥ್ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜನಪ್ರತಿನಿಧಿಗಳು ಹೇಳಿದ ಕೆಲಸಗಳನ್ನು ನಿರ್ಲಕ್ಷ್ಯ ತೋರದೇ ಮಾಡಿಕೊಡಿ ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದರು.

 

Translate »