ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತು  ಮೈಸೂರಲ್ಲಿ ಜಾಗೃತಿ ಜಾಥಾ
ಮೈಸೂರು

ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತು  ಮೈಸೂರಲ್ಲಿ ಜಾಗೃತಿ ಜಾಥಾ

September 23, 2018

ಮೈಸೂರು: ಪರಿಸರ ಸ್ನೇಹಿ ವೈದ್ಯಕೀಯ ತ್ಯಾಜ್ಯದ ಸಶಕ್ತ ನಿರ್ವಹಣೆ ಕುರಿತಂತೆ ಮೈಸೂರಲ್ಲಿ ಇಂದು ವೈದ್ಯರು ಹಾಗೂ ನರ್ಸ್‍ಗಳು ಜನ ಜಾಗೃತಿ ಜಾಥಾ ನಡೆಸಿದರು. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಯೋಜನೆ ಜಾರಿಗಾಗಿ ತರಬೇತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಸಂಘ-ಸಂಸ್ಥೆಗಳು ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸಲು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಸ್ಪತ್ರೆಗಳಿಂದ ಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು.

ಜಿಲ್ಲಾ ಸರ್ಜನ್ ಡಾ. ಪಶುಪತಿ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ಡಾ. ಪ್ರಕಾಶ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಶ್ರೀನಿವಾಸ, ಯೋಜನೆಯ ಮುಖ್ಯಸ್ಥ ಡಾ. ರಾಜು ಸೇರಿದಂತೆ ಹಲವು ವೈದ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅರಮನೆ ಉತ್ತರ ಭಾಗದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಜಾಥಾವು, ಗಾಂಧಿ ವೃತ್ತ, ಓಲ್ಡ್ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ರೈಲ್ವೆ ಸ್ಟೇಷನ್ ಸರ್ಕಲ್, ಮೆಟ್ರೋಪೋಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಂಡಿತು. ಜೆಎಸ್‍ಎಸ್, ಸೆಂಟ್ ಫಿಲೋಮಿನಾ ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ನರ್ಸ್‍ಗಳು ಜಾಥಾದಲ್ಲಿ ಪಾಲ್ಗೊಂಡು ಘೋಷಣಾ ಫಲಕಗಳನ್ನು ಹಿಡಿದು, ಭಿತ್ತಿ ಪತ್ರ ವಿತರಿಸುವ ಮೂಲಕ ಜನರಿಗೆ ಅರಿವು ಮೂಡಿಸಿದರು.

Translate »