ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಡಾ.ಆಯಿಷಾ ಎಂ.ಷರೀಫ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಡಾ.ಆಯಿಷಾ ಎಂ.ಷರೀಫ್ ಅಧಿಕಾರ ಸ್ವೀಕಾರ

September 23, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 6ನೇ ಹಂಗಾಮಿ ಕುಲಪತಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಆಯಿಷಾ ಎಂ.ಷರೀಫ್ ಅವರು ಇಂದು ಅಧಿಕಾರ ವಹಿಸಿಕೊಂಡರು.

ಕ್ರಾಫರ್ಡ್ ಭವನದಲ್ಲಿ ನಿರ್ಗಮಿತ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅವರು ಡಾ.ಆಯಿಷಾ ಎಂ.ಷರೀಫ್ ಅವರಿಗೆ ಅಧಿಕಾರ ವಹಿಸಿಕೊಟ್ಟರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಆಯಿಷಾ ಅವರು, ತಾವು ವಿಶ್ವವಿದ್ಯಾನಿಲಯ ದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಿ ಫಲಿತಾಂಶ ಉತ್ತಮ ಪಡಿಸುವ ಮೂಲಕ ಸಂಸ್ಥೆಯ ಘನತೆ ಎತ್ತಿಹಿಡಿಯುವುದಾಗಿ ತಿಳಿಸಿದರು.

ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು, ಅನ ಧಿಕೃತವಾಗಿ ವಾಸವಿರುವವರನ್ನು ತೆರವುಗೊಳಿಸಿ ನಿಜವಾಗಲೂ ಓದುತ್ತಿರುವ ವಿದ್ಯಾರ್ಥಿ ಗಳಿಗೆ ಅವಕಾಶ ನೀಡುವುದು ನನ್ನ ಮೊದಲ ಆದ್ಯತೆ ಎಂದು ಅವರು ನುಡಿದರು.

ಮಾನಸ ಗಂಗೋತ್ರಿ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಅನುಕೂಲಕ್ಕಾಗಿ ಬ್ಯಾಟರಿಚಾಲಿತ ವಾಹನಗಳನ್ನು ಪೂರೈಸುವ ಪ್ರಸ್ತಾವನೆ ಇತ್ತು. ಆ ಬಗ್ಗೆ ಪರಿಶೀಲಿಸಿದ ನಂತರ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು ಎಂದೂ ಡಾ.ಆಯಿಷಾ ಎಂ.ಷರೀಫ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಹಂಗಾಮಿ ಕುಲಪತಿಗಳನ್ನು, ಕುಲಸಚಿವರು, ಸಹಾಯಕ ಕುಲಸಚಿವರು, ಹಣಕಾಸು ಅಧಿಕಾರಿ ಸೇರಿದಂತೆ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಶುಭ ಕೋರಿದರು.

Translate »