ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ
ಮೈಸೂರು

ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ

January 15, 2019

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಇನ್ಮುಂದೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ-ಪ್ರವಚನ ಮಾಡಿಸಲಾಗುವುದು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸದಸ್ಯರು, ಮುಂದಿನ ದಿನಗಳಲ್ಲಿ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾ ನಿಲಯಗಳ ಪ್ರಾಧ್ಯಾಪಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಲು ನಿರ್ಧರಿಸಲಾಯಿತು.

ವಿಶ್ವದ ಹಲವು ದೇಶಗಳ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾ ಪಕರನ್ನು ಕರೆಸಿ ಪಾಠ ಪ್ರವಚನ ಮಾಡಿಸುವುದರಿಂದ ಸ್ಥಳೀಯ ವಿದ್ಯಾರ್ಥಿಗಳ ಜ್ಞಾನ ಮಟ್ಟ ಹೆಚ್ಚುವುದಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡಲು ಅನು ಕೂಲವಾಗುತ್ತದೆ ಎಂದು ಕೆಲ ಸದಸ್ಯರು ಅಭಿಪ್ರಾಯಪಟ್ಟರು.

ಅದರಿಂದ ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಗಳೊಂದಿಗೆ ಶೈಕ್ಷಣಿಕ ಸಂಬಂಧ ಬೆಸೆದು ಗುಣಾತ್ಮಕ ಶಿಕ್ಷಣ ನೀಡಲು ಸಹಕಾರಿಯಾಗಲಿದೆ. ಒಂದು ತಿಂಗಳ ಕಾಲ ಪ್ರಾಧ್ಯಾಪಕರು ಮೈಸೂರಿನಲ್ಲೇ ವಾಸ್ತವ್ಯ ಹೂಡಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ನೀಡಲು ವ್ಯವಸ್ಥೆ ಕಲ್ಪಿಸಬಹುದು ಎಂದು ಸಲಹೆ ಬಂದಿತು.
ಈ ಯೋಜನೆಗೆ 1 ಕೋಟಿ ರೂ. ಅನುದಾನ ಮೀಸಲಿ ರಿಸಿದ್ದು, ಅನುಕೂಲ ನೋಡಿಕೊಂಡು ಮುಂದಿನ ವರ್ಷ ಅನುದಾನದ ಮೊತ್ತವನ್ನು ಹೆಚ್ಚಿಸಬಹುದು ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಪ್ರಕ್ರಿಯೆ ಆರಂಭಿಸಲು ಸಭೆಯು ನಿರ್ಧರಿಸಿತು.

ಕಳೆದ ವರ್ಷ ಕೈತಪ್ಪಿದ ನ್ಯಾಕ್ ಮಾನ್ಯತೆಯನ್ನು ಈ ಬಾರಿ ಪಡೆಯಲು ಪಣ ತೊಡಬೇಕು, ವಿಶ್ವವಿದ್ಯಾ ನಿಲಯದ ಉನ್ನತಾಧಿಕಾರಿಗಳೂ ಸೇರಿ ಎಲ್ಲಾ ಬೋಧಕ ವರ್ಗ ಗ್ರೇಡ್ 1 ಮಾನ್ಯತೆ ಪಡೆಯಲು ಶ್ರಮಿಸಬೇಕು ಹಾಗೂ ಕಾರ್ಯತಂತ್ರ ರೂಪಿಸಬೇಕೆಂದೂ ಶೈಕ್ಷಣಿಕ ಮಂಡಳಿ ಸಭೆಯು ತೀರ್ಮಾನಿಸಿತು.

ಶೈಕ್ಷಣಿಕ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು, ಸಹಾಯಕ ಪ್ರಾಧ್ಯಾಪಕರು ಸಂಶೋಧನೆ ನಡೆಸಲು 1 ಲಕ್ಷ ರೂ. ಅನುದಾನ ನೀಡುತ್ತಿದ್ದು, ಕಳೆದ ವರ್ಷ 45 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ, ಮುಂದೆ ಮತ್ತಷ್ಟು ಮಂದಿ ಸಂಶೋಧನೆ ಮಾಡಲು ವಿಸ್ತರಿಸಲೂ ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು.

ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಮಾದರಿಯಲ್ಲಿ ಸ್ಕೂಲ್ ಸಿಸ್ಟಂ ಜಾರಿಗೆ ತರಲು ಮೈಸೂರು ವಿಶ್ವವಿದ್ಯಾ ನಿಲಯ ಚಿಂತನೆ ನಡೆಸಿದ್ದು, ಜೂನ್ ಮಾಹೆಯಿಂದ ಹೊಸ ಪದ್ಧತಿ ಜಾರಿಗೆ ತರುವ ಬಗ್ಗೆ ಪ್ರಕ್ರಿಯೆ ನಡೆಸಲೂ ತೀರ್ಮಾನಿಸಲಾಯಿತು. ಕುಲಸಚಿವ ಪ್ರೊ. ಆರ್. ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ. ಬಿ. ಸೋಮ ಶೇಖರ್, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಕಾಲೇಜು ಮಂಡಳಿ ನಿರ್ದೇಶಕ ಪ್ರೊ. ಶ್ರೀಕಂಠಸ್ವಾಮಿ, ಹಣಕಾಸು ಅಧಿಕಾರಿ ಮಹದೇವಪ್ಪ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

Translate »