ಮೈಸೂರು ವಿವಿಗೆ 54ನೇ ರ್ಯಾಂಕಿಂಗ್ ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪಟ್ಟಿ ಬಿಡುಗಡೆ
ಮೈಸೂರು

ಮೈಸೂರು ವಿವಿಗೆ 54ನೇ ರ್ಯಾಂಕಿಂಗ್ ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪಟ್ಟಿ ಬಿಡುಗಡೆ

April 9, 2019

ಮೈಸೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವದೆಹಲಿಯಲ್ಲಿ ಸೋಮವಾರ ಭಾರತೀಯ ವಿಶ್ವವಿದ್ಯಾನಿಲಯಗಳ 2019ನೇ ಸಾಲಿನ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರು ವಿಶ್ವವಿದ್ಯಾನಿಲಯ 54ನೇ ಸ್ಥಾನಕ್ಕೆ ಭಾಜನವಾಗಿದೆ. ಜೊತೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆ ಗುಣಮಟ್ಟ ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್‍ವರ್ಕ್ ಮೂಲಕ 2016ರಿಂದ ವಿವಿಧ ವಿಭಾಗಗಳಲ್ಲಿ ರ್ಯಾಂಕಿಂಗ್ ಪದ್ಧತಿಯನ್ನು ಜಾರಿಗೊಳಿಸಿದ್ದು, 2017ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ 36ನೇ ಸ್ಥಾನ ಲಭಿಸಿತ್ತು. 2017ರಲ್ಲಿ ನೂರಕ್ಕಿಂತ ಕೆಳಗಿಳಿದ್ದಿದ್ದ ವಿವಿ ಇದೀಗ 2019ರಲ್ಲಿ ಮತ್ತೆ ತನ್ನ ಸ್ಥಾನ ಹೆಚ್ಚಿಸಿಕೊಂಡಿದೆ.

ಉಪನ್ಯಾಸ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರ ಅಭ್ಯಾಸ, ವಿದ್ಯಾರ್ಥಿಗಳ ಸಂಖ್ಯೆ, ವಿದೇಶದಲ್ಲಿ ಉದ್ಯೋಗ ಪಡೆದವರ ಸಂಖ್ಯೆ, ಪದವಿ ಫಲಿತಾಂಶ ಹೀಗೆ ಹಲವು ಅಂಶಗಳ ಆಧಾರದಲ್ಲಿ ರ್ಯಾಂಕಿಂಗ್ ನೀಡಲಾಗುತ್ತದೆ. ಸೋಮವಾರ ನವದೆಹಲಿ ಯಲ್ಲಿ ನಡೆದ ರ್ಯಾಂಕಿಂಗ್ ಬಿಡುಗಡೆ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಪಾಲ್ಗೊಂಡಿದ್ದರು.

ಈ ಸಂಬಂಧ ದೂರವಾಣಿ ಮೂಲಕ `ಮೈಸೂರು ಮಿತ್ರ’ನೊಂದಿಗೆ ಸಂತಸ ಹಂಚಿಕೊಂಡ ಪ್ರೊ.ಜಿ.ಹೇಮಂತ್ ಕುಮಾರ್, ಭಾರತೀಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್‍ನಲ್ಲಿ ಮೈಸೂರು ವಿವಿಗೆ 54ನೇ ಸ್ಥಾನ ದಕ್ಕಿರುವುದು ಸಂತಸದೊಂದಿಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಅಧ್ಯಾಪಕ ಹಾಗೂ ವಿದ್ಯಾರ್ಥಿ ಸರಾಸರಿಯನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಾಪಕರ ನೇಮಕ ಮಾಡಿಕೊಳ್ಳುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ 2020ರ ಸಾಲಿನಲ್ಲಿ ಉತ್ತಮ ಸ್ಥಾನಕ್ಕೇರಲು ಹಾಗೂ ನ್ಯಾಕ್ ಸ್ಥಾನಮಾನಕ್ಕಾಗಿ ಈಗಿನಿಂದಲೇ ಯೋಜನೆಗಳನ್ನು ರೂಪಿಸಲಾಗುವುದು. ಈ ಸಂಬಂಧ ಕಾರ್ಯನಿರ್ವಹಿಸಲು ವಿಶೇಷ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದರು.

Translate »