ವಿವಿಗಳು ಗ್ರಾಮ ದತ್ತು ಪಡೆದು ಸಮಸ್ಯೆಗಳ ಸಂಶೋಧನೆ ನಡೆಸಿ ಪರಿಹಾರ ಕಾಣಬೇಕು
ಮೈಸೂರು

ವಿವಿಗಳು ಗ್ರಾಮ ದತ್ತು ಪಡೆದು ಸಮಸ್ಯೆಗಳ ಸಂಶೋಧನೆ ನಡೆಸಿ ಪರಿಹಾರ ಕಾಣಬೇಕು

March 18, 2019

ಮೈಸೂರು: ವಿವಿಗಳು ಗ್ರಾಮಗಳನ್ನು ದತ್ತು ಪಡೆದು ಅಲ್ಲಿನ ಜನರು ಎದುರಿ ಸುತ್ತಿರುವ ಸಮಸ್ಯೆ ಕುರಿತಂತೆ ವಿದ್ಯಾರ್ಥಿಗಳಿಂದ ಸಂಶೋಧನೆ ನಡೆಸಿ ಅವುಗಳಿಗೆ ಪರಿಹಾರ ಕಂಡು ಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುಧೆ ಅಬಿಪ್ರಾಯಪಟ್ಟರು.

ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಭಾನುವಾರ 99ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ವಿಶ್ವ ವಿದ್ಯಾನಿಲಯಗಳು ಹೊಸ ಜ್ಞಾನ, ಅವುಗಳ ಬಳಕೆಯ ಕೇಂದ್ರಗಳಾಗಿರಬೇಕಾಗಿರುವ ಕಾರಣ ವಿವಿಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾದ ಅನಿ ವಾರ್ಯತೆ ಇದೆ ಎಂದರು.

ತಂತ್ರಜ್ಞಾನ ಬಹಳ ಕ್ಷಿಪ್ರವಾಗಿ ಬದಲಾಗುತ್ತಿದ್ದು, ಕಾಲೇಜು ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿ ಸುತ್ತಿರುವುದು ತೀರಾ ಹಳತಾಗುತ್ತಿದೆ. ವಿದ್ಯಾರ್ಥಿ ಗಳನ್ನು ನಾವು ಇಂದು ಯಾವ ರೀತಿ ತಯಾರು ಮಾಡಬೇಕಿದೆ ಎಂದರೆ, ಇನ್ನೂ ಆವಿಷ್ಕಾರಗೊಂಡಿ ರದ ಉಪಕರಣಗಳನ್ನು ತಂತ್ರಗಳನ್ನು ಬಳಸಿ ಇಂದು ನಮ್ಮ ಗಮನಕ್ಕೆ ಬಾರದಿರುವಂತಹ ಸಮಸ್ಯೆಗಳನ್ನು ಅವರು ಪರಿಹರಿಸುವಂತಿರಬೇಕು ಎಂದರು.

ನೈಸರ್ಗಿಕ ವಿಜ್ಞಾನ, ಎಂಜಿನಿಯರಿಂಗ್ ಹಾಗೂ ಔಷಧ ಕ್ಷೇತ್ರಗಳಲ್ಲಿ ಈ ಬದಲಾವಣೆ ಕ್ಷಿಪ್ರ ಗತಿ ಯಲ್ಲಿ ಆಗುತ್ತಿದ್ದು, ಹೊಸ ಹೊಸ ಸಂಶೋಧನೆ ಗಳು ಆಗಾಗ್ಗೆ ಆಗುತ್ತಲೇ ಇವೆ. ಈ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸುವ ಕೌಶಲ್ಯ ಕಲಿಸಬೇಕು ಎಂದು ಸಲಹೆ ನೀಡಿದರು. ಕಲಿಕೆ ಎನ್ನುವುದು ಕೊನೆಯ ಉಸಿರಿನವರೆಗೂ ಮುಂದುವರಿಯಬೇಕು. ಅಂತರ್‍ಜಾಲದ ಮೂಲಕ ಲಭ್ಯವಾಗುವ ಜ್ಞಾನ ಬೆರಳ ತುದಿಯಲ್ಲಿ ಮತ್ತು ಮೊಬೈಲ್ ಉಪಕರಣಗಳಲ್ಲಿ ಅಡಗಿರುವ ಕ್ರಾಂತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇತರೆ ದೇಶಗಳಲ್ಲಿ ವಿಶ್ವ ವಿದ್ಯಾನಿಲಯ ಗಳಲ್ಲಿ ಸಂಶೋಧನೆ ಮಾಡಿದ್ದು, ಹೊರಗೆ ಕಾರ್ಯರೂಪಕ್ಕೆ ಬಂದರೆ, ಇಲ್ಲಿ ಹೊರಗೆ ಕಾರ್ಯರೂಪಕ್ಕೆ ಬಂದುದ್ದನ್ನು ವಿವಿಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಇದು ತಪ್ಪಬೇಕು. ಇಂದಿನ ದಿನಗಳಲ್ಲಿ ಇಡೀ ಜಗತ್ತೇ ಒಂದು ಗ್ರಾಮವಾಗಿ ಮಾರ್ಪಟ್ಟಿರುವ ಕಾರಣ ಎಲ್ಲ ರಾಷ್ಟ್ರಗಳೂ ಜ್ಞಾನ, ವಾಣಿಜ್ಯ, ಉದ್ಯಮ ಮತ್ತು ಸಾಂಸ್ಕøತಿಕ ವಿನಿಮಯ ಗಳಲ್ಲಿ ತೊಡಗಿವೆ. ಈ ಕಾರಣದಿಂದಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳ ವಿವಿಗಳೊಡನೆ ಸಂಪರ್ಕ ಕಲ್ಪಿಸಿಕೊಂಡು ಅಲ್ಲಿನ ಬೋಧಕರನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸುವುದು, ಮೊದಲಾದ ಕಾರ್ಯ ಭಾರತದಲ್ಲಿ ಆಗಬೇಕಾಗಿದೆ. ಜೊತೆಗೆ ದಿನದ 24 ಗಂಟೆಯೂ ವಿವಿಗಳಲ್ಲಿ ಅಧ್ಯಯನಕ್ಕೆ ಅವಕಾಶ ಇರುವಂತಹ ಪರಿಸರ, ಸೌಲಭ್ಯ ಸಹಾ ಸೃಷ್ಟಿಸಬೇಕಾಗಿದೆ ಎಂದು ಹೇಳಿದರು. ಕೇವಲ ಜ್ಞಾನ ಸಂಗ್ರಹಿಸಿದರಷ್ಟೇ ಸಾಲದು, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಿಸಿದಂತೆ ಮಿತಿ ಇರುವ ಕಾರಣ ಜ್ಞಾನಕ್ಕೆ ಆವಿಷ್ಕಾರ, ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ನೀಡುವ ಪ್ರಕ್ರಿಯೆ ಯಲ್ಲಿಯೂ ತೊಡಗಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ತಿಪಟೂರು ನೊಣವಿನಕೆರೆ ಸೋಮನಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ ಕರಿವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಕೇರಳದ ಕೊಲ್ಲಂ ಅಮೃತಪುರಿ ಅಮೃತ ವಿಶ್ವ ವಿದ್ಯಾಪೀಠದ ಅಧ್ಯಕ್ಷೆ ಮಾತಾ ಅಮೃತಾನಂದಮಯಿ ದೇವಿ ಅವರಿಗೂ ಗೌರವ ಡಾಕ್ಟರೇಟ್ ಪ್ರಕಟಿಸಿದ್ದರೂ, ಮಾತಾ ಅಮೃತಾನಂದಮಯಿ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಅಲ್ಲದೆ ವಿವಿಧ ವಿಷಯಗಳಲ್ಲಿ ಪಿಹೆಚ್‍ಡಿ ಸೇರಿದಂತೆ ವಿವಿಧ ನಿಕಾಯಗಳಲ್ಲಿ ಪದಕ ಮತ್ತು ಬಹುಮಾನಗಳನ್ನು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಪ್ರದಾನ ಮಾಡಿದರು. ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಪತಿ ಪ್ರೊ.ಕೆ.ಎಂ.ಮಹದೇವನ್ ಇನ್ನಿತರರು ಉಪಸ್ಥಿತರಿದ್ದರು.

Translate »