ಮೈಸೂರು ಪೊಲೀಸರಿಂದ ರೌಡಿಗಳ ಪರೇಡ್
ಮೈಸೂರು

ಮೈಸೂರು ಪೊಲೀಸರಿಂದ ರೌಡಿಗಳ ಪರೇಡ್

March 18, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರು ಆಪರೇಷನ್ ಸನ್‍ರೈಸ್ ನಡೆಸಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿರುವ 85 ಮಂದಿ ರೌಡಿಗಳನ್ನು ಕರೆತಂದು ಪರೇಡ್ ನಡೆಸಿ ಮತದಾರರು ಹಾಗೂ ಸಾರ್ವಜನಿಕರಿಗೆ ಧಮಕಿ ಹಾಕಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಮುಂಜಾನೆಯೇ ರೌಡಿಗಳ ಮನೆಯ ಕದ ತಟ್ಟಿ ಬೆವರಿಳಿಸಿದರು. ಶಸ್ತ್ರ ಸಜ್ಜಿತರಾಗಿಯೇ ರೌಡಿಗಳ ಮನೆ ಬಳಿ ಮುಂಜಾನೆ 5 ಗಂಟೆಗೆ ತೆರಳಿದ ಪೊಲೀಸರು, ಮನೆಯಲ್ಲಿ ಬೆಚ್ಚಗೆ ಮಲಗಿದ್ದ ರೌಡಿಶೀಟರ್‍ಗಳ ಕೊರಳು ಪಟ್ಟಿ ಹಿಡಿದು ತಮ್ಮ ವಾಹನಕ್ಕೆ ಹತ್ತಿಸಿಕೊಂಡರು. ಅಲ್ಲದೇ ಮನೆಯನ್ನು ಶೋಧಿಸಿ ಮಾರಕಾಸ್ತ್ರಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ ಮುಂಜಾನೆಯ ಚಳಿಯಲ್ಲಿಯೂ ರೌಡಿಗಳ ಬೆವರಿಳಿಸಿದರು. ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 85 ರೌಡಿಗಳನ್ನು ಸಿ.ಆರ್.ಮೈದಾನಕ್ಕೆ ಕರೆತಂದರು. ಡಿಸಿಪಿ ಎಂ.ಮುತ್ತುರಾಜು ಮೈದಾನದಲ್ಲಿ ಕೈಕಟ್ಟಿ ತಲೆ ಬಗ್ಗಿಸಿಕೊಂಡು ನಿಂತಿದ್ದ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಲೋಕಸಭಾ ಚುನಾವಣೆ ವೇಳೆ ಯಾವುದೇ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಬಾರದು. ಇಂತದೇ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಒತ್ತಾಯಿಸಬಾರದು. ತೋಳ್ಬಲ ಪ್ರಯೋಗ ಹಾಗೂ ಧಮ್ಕಿ ಹಾಕಲು ಮುಂದಾದರೆ ಪೊಲೀಸ್ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ. ಬಾಲ ಬಿಚ್ಚದೇ ತಮ್ಮ ಪಾಡಿಗೇ ತಾವಿದ್ದರೆ ನಿಮಗೂ ಕ್ಷೇಮ, ಅಲ್ಲದೇ ನಿಮ್ಮ ಕುಟುಂಬದವರಿಗೂ ಕ್ಷೇಮ. ಅದನ್ನು ಬಿಟ್ಟು ರಾಜಕೀಯ ಪಕ್ಷಗಳ ಮುಖಂಡರ ಪರವಾಗಿ ರೌಡಿಜಂಗೆ ಇಳಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶೋಧ: ಸೂರ್ಯ ಹುಟ್ಟುವ ಮುನ್ನವೇ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್‍ಪೆಕ್ಟರ್ ಗಳು ಮಹಿಳಾ ಸಿಬ್ಬಂದಿಯನ್ನು ಒಳಗೊಂಡಂತೆ ರೌಡಿಶೀಟರ್‍ಗಳ ಮನೆ ಹೊಕ್ಕಿದ್ದರು. ಡಿಸಿಪಿ ಮುತ್ತುರಾಜ್ ಕೆಲವು ರೌಡಿಶೀಟರ್‍ಗಳ ಮನೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುವ ಮೂಲಕ ಗಮನ ಸೆಳೆದರು. ರೌಡಿಗಳ ಮನೆಯಲ್ಲಿ ಬೀರು, ಅಟ್ಟದ ಮೇಲೆ, ಸ್ಟೋರ್ ರೂಂ ಸೇರಿದಂತೆ ಎಲ್ಲೆಡೆ ಸೂಕ್ಷ್ಮವಾಗಿ ಶೋಧಿಸಿ ಮಾರ ಕಾಸ್ತ್ರಗಳು, ಬಚ್ಚಿಟ್ಟಿದ್ದಾರೆ ಎಂದು ಪರಿಶೀಲಿಸಲಾಯಿತು.

Translate »