ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಕೊಲೆ
ಮೈಸೂರು

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

March 18, 2019

ಮೈಸೂರು: ಹಣಕಾಸು ವಿಚಾರದಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ ಸ್ಮಶಾನದಲ್ಲಿ ಶವವನ್ನು ಹೂತಿಟ್ಟಿದ್ದ ಪ್ರಕರಣವನ್ನು ಭೇದಿಸಿರುವ ವಿಜಯನಗರ ಪೊಲೀಸರು ಭಾನುವಾರ ತಹಸೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಜರುಗಿದೆ.

ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ರಾಮು ಎಂಬುವರ ಮಗ ರಾಘವೇಂದ್ರ (24) ಎಂಬುವರೇ ಸ್ನೇಹಿತರಿಂದಲೇ ಹತ್ಯೆಗೀಡಾದ ಯುವಕ ಎಂದು ಗುರುತಿಸ ಲಾಗಿದೆ. ಕಾರು ಚಾಲಕನಾಗಿದ್ದ ರಾಘ ವೇಂದ್ರ ಬಡ್ಡಿ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಸ್ನೇಹಿತನೊಬ್ಬನಿಗೆ 5 ಲಕ್ಷ ರೂ. ನೀಡಿದ್ದ ಸಾಲವನ್ನು ಹಿಂತಿ ರುಗಿಸುವಂತೆ ಕೇಳಿದ್ದೇ ಆತನ ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಣ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಾಲ ಪಡೆ ದಿದ್ದ ಯುವಕ ತನ್ನ ಮೂವರು ಸಹಚರ ರೊಂದಿಗೆ ಮಾ.13ರಂದು ಮನೆಯಲ್ಲಿದ್ದ ರಾಘವೇಂದ್ರನನ್ನು ಹೊರಗೆ ಕರೆದುಕೊಂಡು ಹೋಗಿದ್ದ. ಆದರೆ ಒಂದು ದಿನ ಕಳೆದರೂ ಆತ ಹಿಂತಿರುಗಿರಲಿಲ್ಲ.

ಇದರಿಂದ ಆತಂಕ ಗೊಂಡ ರಾಘವೇಂದ್ರ ಅವರ ತಂದೆ ರಾಮು ವಿಜಯನಗರ ಪೊಲೀಸರಿಗೆ ಮಗ ಕಾಣೆಯಾಗಿರುವುದಾಗಿ ದೂರು ನೀಡಿ ದ್ದರು. ಮನೆಯಿಂದ ಹೊರಗೆ ಕರೆದು ಕೊಂಡ ಹೋದ ಆರೋಪಿಗಳು ರಾಘ ವೇಂದ್ರನಿಗೆ ಮದ್ಯಪಾನ ಮಾಡಿಸಿದ್ದಾರೆ. ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ವಾಗಿ ಗಾಯಗೊಂಡು ಮೃತಪಟ್ಟ ರಾಘವೇಂದ್ರನ ಶವವನ್ನು ಬಿಸಾಡಿದರೆ ತಾವು ಸಿಕ್ಕಿಹಾಕಿಕೊಳ್ಳುವುದಾಗಿ ಹೆದರಿ ಬನ್ನಿಮಂಟಪದ ಜೋಡಿ ತೆಂಗಿನ ಮರ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಹೂತು ಹಾಕುವುದಕ್ಕೆ ಸಂಚು ರೂಪಿಸಿದ್ದಾರೆ. ಸ್ಮಶಾನಕ್ಕೆ ಶವದೊಂದಿಗೆ ಬಂದ ಆರೋಪಿಗಳು ಕಾವಲುಗಾರನಿಗೆ ಹಣ ನೀಡಿ, ಜೆಸಿಬಿ ಯಂತ್ರವನ್ನು ಬಾಡಿಗೆಗೆ ತಂದು ಮೃತ ದೇಹವನ್ನು ಹೂತು ಹಾಕಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಣೆಯಾಗಿರುವ ದೂರು ನೀಡಿದ್ದ ರಾಘವೇಂದ್ರರ ತಂದೆ ರಾಮು ಮನೆಯಿಂದ ಕರೆದುಕೊಂಡು ಹೋಗಿದ್ದ ಸ್ನೇಹಿತರ ಹೆಸರನ್ನು ದೂರಿನಲ್ಲಿ ಉಲ್ಲೇಖಿ ಸಿದ್ದರು. ಇದರ ಆಧಾರದ ಮೇಲೆ ಶನಿವಾರ ಆರೋಪಿತರಲ್ಲಿ ಒಬ್ಬನನ್ನು ಕರೆತಂದು ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ರಾಘವೇಂದ್ರನನ್ನು ಹಣಕಾಸು ವಿಚಾರಕ್ಕೆ ಕೊಲೆ ಮಾಡಿ ಜೋಡಿ ತೆಂಗಿನ ಮರದ ರಸ್ತೆಯ ಸ್ಮಶಾನದಲ್ಲಿ ಹೂತು ಹಾಕಿರುವುದಾಗಿ ಬಾಯಿ ಬಿಟ್ಟಿದ್ದ.

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ವಿಜಯನಗರ ಪೊಲೀಸರು, ಭಾನುವಾರ ಬೆಳಿಗ್ಗೆ ಹೂತಿಟ್ಟಿದ್ದ ಶವವನ್ನು ಹೊರ ತೆಗೆದು ರಾಘವೇಂದ್ರರ ಪೋಷಕರಿಗೆ ತೋರಿಸಿದರು. ಆ ಶವ ತಮ್ಮ ಮಗನದ್ದೇ ಎಂದು ಗುರುತಿಸಿದ ಬಳಿಕ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ನಂತರ ಅಲ್ಲಿಯೇ ವಿಧಿ-ವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಲಾ ಯಿತು. ಈ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯ ಸ್ಮಶಾನದ ಸುತ್ತ ಬಿಗುವಿನ ವಾತಾವರಣ ಉಂಟಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಮಶಾನದೊಳಕ್ಕೆ ಪತ್ರಕರ್ತರೂ ಸೇರಿದಂತೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು.

Translate »