`ಕೈ’ ಬಿಟ್ಟು `ಕಮಲ’ ಹಿಡಿದ ಮಾಜಿ ಸಚಿವ ಎ.ಮಂಜು
ಮೈಸೂರು

`ಕೈ’ ಬಿಟ್ಟು `ಕಮಲ’ ಹಿಡಿದ ಮಾಜಿ ಸಚಿವ ಎ.ಮಂಜು

March 18, 2019

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಅವರು ನಿರೀಕ್ಷೆಯಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆದಿದ್ದು, ಎ.ಮಂಜು ಅವರ ಒಂದೇ ಹೆಸರನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಮಂಜು ಅವರು ಇಂದು ಸಂಜೆ ಹಠಾತ್ತನೇ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಆನ್‍ಲೈನ್‍ನಲ್ಲಿ ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆದರು. ಅವರಿಗೆ ಹಾಸನದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರೀತಂಜೆ.ಗೌಡ ಸೇರಿದಂತೆ ಇತರ ಮುಖಂಡರು ಬಿಜೆಪಿ ಧ್ವಜ ನೀಡುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ದೇವೇಗೌಡರ ಕುಟುಂಬದ ಜೊತೆ ರಾಜಕೀಯ ವೈರತ್ವ ಹೊಂದಿದ್ದ ಎ.ಮಂಜು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕೂಡ ಬಹಿರಂಗವಾಗಿ ದೇವೇಗೌಡರ ಕುಟುಂಬದ ವಿರುದ್ಧ ಕಿಡಿಕಾರುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡು ಹಾಸನ ಕ್ಷೇತ್ರ ಜೆಡಿಎಸ್ ಪಾಲಾದಾಗ ಮಂಜು ಅವರು ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಿದರೇ ಮಾತ್ರ ಮೈತ್ರಿ ಧರ್ಮದಂತೆ ಬೆಂಬಲ ನೀಡುತ್ತೇವೆ. ಅವರ ಮೊಮ್ಮಗ ಸ್ಫರ್ಧಿಸಿದರೆ ಹಾಸನದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಘೋಷಣೆ ಯಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆ ಗೊಂಡು ಪ್ರಜ್ವಲ್ ರೇವಣ್ಣ ವಿರುದ್ಧ sಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಅವರಿಂದ ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದ್ಯಾಂತ ತಮ್ಮ ಬೆಂಬಲಿಗ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಸೋಮ ವಾರ ತಮ್ಮ ನಿಲುವನ್ನು ಪ್ರಕಟಿಸುವುದಾಗಿ ಮಂಜು ತಿಳಿಸಿದ್ದರಾದರೂ, ಇಂದು ರಾಜ್ಯ ಬಿಜೆಪಿ ಚುನಾ ವಣಾ ಸಮಿತಿಯು ತಮ್ಮನ್ನು ಅಭ್ಯರ್ಥಿಯಾಗಿ ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಸಂಜೆ ಹಠಾತ್ತನೆ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆದರು. ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರ ವಿರುದ್ಧ 1 ಲಕ್ಷಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಪರಾಭವ ಹೊಂದಿದ್ದ ಮಂಜು ಅವರ ಸ್ಫರ್ಧೆ ದೇವೇಗೌಡರ ಕುಟುಂಬಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಅದೇ ವೇಳೆ ಮಂಜು ಅವರ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುತ್ತಿದ್ದ ಪಕ್ಷದ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಅವರು ಇಂದು ಎ.ಮಂಜು ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Translate »