ಕ್ಯಾನ್ಸರ್ ತಡೆಗೆ ವಾಕಥಾನ್ ಮೂಲಕ ಜಾಗೃತಿ
ಮೈಸೂರು

ಕ್ಯಾನ್ಸರ್ ತಡೆಗೆ ವಾಕಥಾನ್ ಮೂಲಕ ಜಾಗೃತಿ

February 15, 2021

ಮೈಸೂರು,ಫೆ.14(ಪಿಎಂ)- ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ವತಿಯಿಂದ ಭಾನುವಾರ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಮೈಸೂರು ವಿವಿ ಓವಲ್ ಮೈದಾನದವರೆಗೆ ವಾಕಥಾನ್ ನಡೆಸಲಾಯಿತು. ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ನಿಕಟಪೂರ್ವ ಮೇಯರ್ ತಸ್ನೀಂ ವಾಕಥಾನ್‍ಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ಕ್ಯಾನ್ಸರ್ ತಡೆಯಲು ಆರೋಗ್ಯ ಪೂರ್ಣ ಜೀವನಶೈಲಿ ಪಾಲಿಸಲು ಹಾಗೂ ಯಾವುದೇ ಭಯವಿಲ್ಲದೆ ಶೀಘ್ರವಾಗಿ ಪರಿಣಿತರಲ್ಲಿ ಪರೀಕ್ಷಿಸಿಕೊಳ್ಳಲು ಸಾರ್ವಜನಿಕರನ್ನು ಕೋರಿದರು.

ಹಾಸ್ಪಿಟಲ್‍ನ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್ ಮಾತನಾಡಿ, ಕ್ಯಾನ್ಸರ್ ರೋಗ ತಡೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲಾ ಸಂಘ-ಸಂಸ್ಥೆಗಳು ಸಹಕರಿಸ ಬೇಕು. ಎಲ್ಲೆಡೆ ಅರಿವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಚಾಮರಾಜ ಒಡೆಯರ್ ವೃತ್ತ, ಕೆಆರ್ ವೃತ್ತ ಮಾರ್ಗ ವಾಗಿ ದೇವರಾಜ ಅರಸ್ ರಸ್ತೆಯ ಮೂಲಕ ಡಿಸಿ ಕಚೇರಿ ಎದುರಿನ ಮೈಸೂರು ವಿವಿ ಓವಲ್ ಮೈದಾನ ತಲುಪಿ ವಾಕಥಾನ್ ಅಂತ್ಯಗೊಂಡಿತು. ಕಾವೇರಿ ಸಮೂಹದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ವಾಕಥಾನ್‍ನಲ್ಲಿ ಪಾಲ್ಗೊಂಡಿದ್ದರು. ಹಾಸ್ಪಿಟಲ್‍ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ವೈದ್ಯಕೀಯ ಅಧೀಕ್ಷಕ ಡಾ.ರಾಜೀವ್, ತಜ್ಞ ವೈದ್ಯರಾದ ಡಾ.ಗಿರೀಶ್, ಡಾ.ಅರವಿಂದ್ ಮತ್ತಿತರರು ಹಾಜರಿದ್ದರು.

 

 

Translate »