ಸರಸ್ವತಿಪುರಂ ಪೊಲೀಸರಿಂದ 2 ಯಶಸ್ವಿ ಕಾರ್ಯಾಚರಣೆ
ಮೈಸೂರು

ಸರಸ್ವತಿಪುರಂ ಪೊಲೀಸರಿಂದ 2 ಯಶಸ್ವಿ ಕಾರ್ಯಾಚರಣೆ

February 15, 2021

ಮೈಸೂರು,ಫೆ.14(ಎಂಟಿವೈ)-ಇತ್ತೀಚೆಗೆ ಮೈಸೂ ರಿನ ಸರಸ್ವತಿಪುರಂ ಠಾಣೆ ಪೊಲೀಸರು 2 ಯಶಸ್ವಿ ಕಾರ್ಯಾಚರಣೆಗಳಲ್ಲಿ ಇಬ್ಬರು ಸುಲಿಗೆಕೋರರು ಮತ್ತು ಒಬ್ಬ ಮೊಬೈಲ್‍ಫೋನ್ ಚೋರನನ್ನು ಬಂಧಿಸಿ, ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿ ರಾತ್ರಿ ವೇಳೆ ದಾರಿಹೋಕ ರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು, ಆರೋಪಿಗಳಿಂದ 2 ಮೋಟಾರ್ ಬೈಕ್, 1 ಮೊಬೈಲ್‍ಫೋನ್ ಹಾಗೂ 400 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಸರಸ್ವತಿಪುರಂ 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ ನಿವಾಸಿ ಭರತ್ ಬಿನ್ ಸುರೇಶ್(24), ಕುವೆಂಪು ನಗರ ಕೆ.ಬ್ಲಾಕ್ 5ನೇ ಕ್ರಾಸ್ ನಿವಾಸಿ ಆರ್.ಚಂದು ಬಿನ್ ರಾಮಕೃಷ್ಣ(21) ಬಂಧಿತರು. ಇವರಿಬ್ಬರೂ ಮತ್ತೊಬ್ಬ ಸಹಚರರನೊಂದಿಗೆ ಸೇರಿಕೊಂಡು ಫೆ.1ರ ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್‍ನಲ್ಲಿ ಹಿಂಬಾಲಿಸಿ, ಸರ ಸ್ವತಿಪುರಂ ಅಗ್ನಿಶಾಮಕ ಠಾಣೆ ವೃತ್ತದ ಬಳಿ ಅಡ್ಡಗಟ್ಟಿ, ಮೊಬೈಲ್‍ಫೋನ್ ಮತ್ತು ಪರ್ಸ್ ಕಿತ್ತುಹೊಂಡು ಪರಾರಿ ಯಾಗಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಸರಸ್ವತಿಪುರಂನ ದೊಡ್ಡ ಮೋರಿ ರಸ್ತೆ ಬಳಿ ಫೆ.9ರಂದು ಮೊಬೈಲ್ ಫೋನ್ ಮಾರಲೆತ್ನಿ ಸುತ್ತಿದ್ದ ಇಬ್ಬರು ಸುಲಿಗೆಕೋರರನ್ನು ವಶಕ್ಕೆ ಪಡೆದು ವಿಚಾ ರಣೆ ನಡೆಸಿದಾಗ ಸುಲಿಗೆ ಪ್ರಕರಣ ಬಯಲಾಗಿದೆ. ತಕ್ಷಣ ಇಬ್ಬರನ್ನೂ ಬಂಧಿಸಿದ ಪೊಲೀಸರು ಆರೋಪಿಗಳಿಂದ 8 ಸಾವಿರ ರೂ. ಮೌಲ್ಯದ 1 ಮೊಬೈಲ್ ಫೋನ್, 400 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಗಾಗಿ ಶೋಧ ಮುಂದುವರಿಸಿದ್ದಾರೆ.

ಕಳ್ಳನ ಸೆರೆ; 70
ಸಾವಿರ ರೂ. ಮೊಬೈಲ್ ವಶ
ಮೈಸೂರಲ್ಲಿ ಮನೆಗಳಿಂದ 2 ಸ್ಮಾರ್ಟ್‍ಫೋನ್‍ಗಳನ್ನು ಕಿಟಕಿಗಳ ಮೂಲಕ ಎಗರಿಸಿದ್ದ ಕಳ್ಳನೊಬ್ಬನನ್ನು ಸರಸ್ವತಿಪುರಂ ಠಾಣೆ ಪೊಲೀಸರು ಶನಿವಾರ ಬಂಧಿಸಿ, 70 ಸಾವಿರ ರೂ.ಗಳ 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕೆ.ಜಿ. ಕೊಪ್ಪಲು 3ನೇ ಕ್ರಾಸ್ ನಿವಾಸಿ ಅಕ್ಷಯ್ ಬಿನ್ ಲೇ. ಕುಮಾರ್ (19) ಎಂಬಾತನೆ ಸೆರೆಸಿಕ್ಕವನು. ಆರೋಪಿ ಜ.23ರ ರಾತ್ರಿ ಕುವೆಂಪುನಗರದ ಮನೆಯೊಂದರಲ್ಲಿ ಚಾರ್ಜ್‍ಗಾಗಿ ಇಟ್ಟಿದ್ದ ದುಬಾರಿ ಬೆಲೆಯ 2 ಸ್ಮಾರ್ಟ್ ಫೋನ್‍ಗಳನ್ನು ಕಿಟಿಕಿಯಿಂದ ಕೈಹಾಕಿ ಎಗರಿಸಿದ್ದ. ಮನೆಯವರು ಮೊಬೈಲ್ ಕಳವಾದ ಬಗೆಗಿನ ದೂರನ್ನು 20 ದಿನ ತಡವಾಗಿ, ಅಂದರೆ ಫೆ.12ರಂದು ಸರಸ್ವತಿ ಪುರಂ ಠಾಣೆಯಲ್ಲಿ ದಾಖಲಿಸಿದ್ದರು. ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಫೆಬ್ರವರಿ 13ರಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ.

ಕಾರ್ಯಾಚರಣೆ: ಎರಡೂ ಪ್ರಕರಣಗಳಲ್ಲಿ ಡಿಸಿಪಿ ಗೀತಾ ಪ್ರಸನ್ನ, ಕೃಷ್ಣರಾಜ ವಿಭಾಗ ಎಸಿಪಿ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಸರ ಸ್ವತಿಪುರಂ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಸಿ.ತಿಮ್ಮರಾಜು, ಸಬ್‍ಇನ್‍ಸ್ಪೆಕ್ಟರ್‍ಗಳಾದ ಎಸ್.ರಾಚಯ್ಯ, ಎನ್.ಭವ್ಯಾ, ಪೊಲೀಸ್ ಸಿಬ್ಬಂದಿ ಬಸವರಾಜೇಅರಸ್, ರಾಘವೇಂದ್ರ, ಹೆಚ್.ವಿ.ಮಂಜುನಾಥ, ಮಂಜುನಾಥ, ಉಮೇಶ್ ಮತ್ತು ಬಿ.ಕೆ.ಹರೀಶ್‍ಕುಮಾರ್ ಕಾರ್ಯಾಚರಣೆ ನಡೆಸಿದ್ದರು. ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಪ್ರಶಂಸಿಸಿದ್ದಾರೆ.

Translate »