ಅಡ್ವಾಣಿ, ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಆರೋಪಿಗಳು ದೋಷಮುಕ್ತ
ಮೈಸೂರು

ಅಡ್ವಾಣಿ, ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಆರೋಪಿಗಳು ದೋಷಮುಕ್ತ

October 1, 2020

ಲಖನೌ, ಸೆ.30-ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಸೇರಿ ದಂತೆ ಎಲ್ಲಾ 32 ಮಂದಿ ಆರೋಪಿಗಳಿಗೆ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ 28 ವರ್ಷಗಳ ದೀರ್ಘ ಕಾಲದ ಕಾನೂನು ಹೋರಾ ಟಕ್ಕೆ ಇಂದು ತಾತ್ವಿಕ ಅಂತ್ಯ ಸಿಕ್ಕಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಉದ್ದೇಶ ಪೂರ್ವಕವಾಗಿ ಮಸೀದಿಯನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಲು ಆರೋಪಿ ಗಳ ವಿರುದ್ಧ ಪ್ರಬಲ ಸಾಕ್ಷಿಗಳಿಲ್ಲ ಎಂದು ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್ ತೀರ್ಪು ಪ್ರಕಟಿಸಿದ್ದಾರೆ.

ಈ ಮೂಲಕ 32 ಮಂದಿ ಆರೋಪಿಗಳಿಗೆ ಬುಧವಾರ ಕೋರ್ಟ್‍ನಿಂದ ಸಿಕ್ಕಿದ ತೀರ್ಪು ಮಹತ್ವದ ಜಯ ಎನ್ನಬಹುದು. ತೀರ್ಪು ಹೊರಬರುತ್ತಿದ್ದಂತೆ

ಕೇಂದ್ರದ ಸಚಿವರು ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ ನಿವಾಸಕ್ಕೆ ತೆರಳಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಬಿಜೆಪಿ ನಾಯಕರಿಗೆ ಇಂದು ನಿರ್ಣಾಯಕ ದಿನವಾಗಿದ್ದು, ಬಹಳ ದೊಡ್ಡ ಜಯ ಸಿಕ್ಕಿದಂತಾಗಿದೆ. ವಿಚಾರಣೆಯ ಹಿನ್ನೆಲೆ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಸಿಬಿಐ ಕೋರ್ಟ್‍ಗೆ ತೀರ್ಪು ನೀಡಲು ಸೆ.30ರವರೆಗೆ ಕಾಲಾವಕಾಶ ನೀಡಿತ್ತು. ಈ ಹಿಂದೆ ಆಗಸ್ಟ್ 31ರೊಳಗೆ ತೀರ್ಪು ನೀಡಬೇ ಕೆಂದು ಸೂಚಿಸಿತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್, ಅಂತಿಮ ತೀರ್ಪನ್ನು ಆರು ತಿಂಗಳೊಳಗೆ ನೀಡಬೇಕೆಂದು ಸೂಚಿಸಿತ್ತು, ಅದು ಕಳೆದ ಏಪ್ರಿಲ್ 19ಕ್ಕೆ ಮುಕ್ತಾಯವಾಗಿ ನಂತರ ಆ.31ರವರೆಗೆ ಕೋವಿಡ್-19 ಹಿನ್ನೆಲೆಯಲ್ಲಿ ವಿಸ್ತರಣೆಯಾಗಿತ್ತು. 2017ರ ಏಪ್ರಿಲ್ 19ರಂದು ಸುಪ್ರೀಂಕೋರ್ಟ್ ವಿಶೇಷ ಸಿಬಿಐ ಕೋರ್ಟ್‍ಗೆ ನಿರ್ದೇಶನ ನೀಡಿ ಪ್ರತಿನಿತ್ಯ ವಿಚಾರಣೆ ನಡೆಸಿ 2 ವರ್ಷಗಳೊಳಗೆ ತೀರ್ಪು ನೀಡುವಂತೆ ಆದೇಶಿಸಿತ್ತು. ಅಲಹಾ ಬಾದ್ ಹೈಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಕುರಿತು 2001ರ ಫೆಬ್ರವರಿ 12ರಂದು ತೀರ್ಪು ನೀಡಿ ಎಲ್.ಕೆ. ಅಡ್ವಾಣಿ ಮತ್ತು ಇತರ ಆರೋಪಿಗಳ ವಿರುದ್ಧದ ಪಿತೂರಿ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. 2017ರಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಮೊದಲು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಲಖನೌ ಮತ್ತು ರಾಯ್ ಬರೇಲಿ ಕೋರ್ಟ್‍ನಲ್ಲಿ ಎರಡು ಪ್ರತ್ಯೇಕ ವಿಚಾರಣೆಗಳು ನಡೆಯುತ್ತಿದ್ದವು. ಮೊದಲ ಕೇಸು ಲಖನೌ ಕೋರ್ಟ್‍ನಲ್ಲಿ ಕರ ಸೇವಕರ ವಿರುದ್ಧ ಮತ್ತು ಮತ್ತೊಂದು ಕೇಸು ರಾಯ್ ಬರೇಲಿ ಕೋರ್ಟ್‍ನಲ್ಲಿ 8 ಮಂದಿ ಅತೀ ಗಣ್ಯ ವ್ಯಕ್ತಿಗಳ ವಿರುದ್ಧವಾಗಿತ್ತು.

2017ರ ಏಪ್ರಿಲ್‍ನಲ್ಲಿ ಸುಪ್ರೀಂಕೋರ್ಟ್ ಕೇಸನ್ನು ರಾಯ್ ಬರೇಲಿ ಕೋರ್ಟ್‍ನಿಂದ ಸಂಪೂರ್ಣವಾಗಿ ಲಖನೌ ವಿಶೇಷ ಸಿಬಿಐ ಕೋರ್ಟ್‍ಗೆ ವರ್ಗಾಯಿಸಿತ್ತು. ಕೊರೊನಾ ಮತ್ತು ವಯಸ್ಸಿನ ಕಾರಣ ಹಿನ್ನೆಲೆಯಲ್ಲಿ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋ ಹರ್ ಜೋಷಿ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಉಳಿದ ಆರೋಪಿಗಳು ಲಖನೌ ಕೋರ್ಟ್‍ಗೆ ಖುದ್ದಾಗಿ ಹಾಜರಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ರಾಜಕೀಯ ಶತ್ರುಗಳು ತಮ್ಮ ವಿರುದ್ಧ ಪಿತೂರಿ ನಡೆಸಿ ಬಾಬ್ರಿ ಮಸೀದಿ ಕೇಸಿನಲ್ಲಿ ಆರೋಪಿಗಳ ಸ್ಥಾನದಲ್ಲಿ ತಮ್ಮನ್ನು ನಿಲ್ಲಿಸಿದ್ದಾರೆ ಎಂದೇ ಬಿಜೆಪಿ ನಾಯಕರು ಕೋರ್ಟ್‍ನಲ್ಲಿ ವಾದಿಸಿಕೊಂಡು ಬಂದಿದ್ದರು.

ನನ್ನ, ಬಿಜೆಪಿ ನಂಬಿಕೆ, ಬದ್ಧತೆಗೆ ಸಿಕ್ಕಿದ ಜಯ
ಲಖನೌ, ಸೆ.30-ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು, ಬಿಜೆಪಿಯ ರಾಜಕೀಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರ ಪಾಲಿಗೆ ಅತ್ಯಂತ ಪ್ರಮುಖವಾಗಿತ್ತು. ಈ ಇಳಿವಯಸ್ಸಿನಲ್ಲಿ ಇಂದು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಅವರ ಪಾಲಿಗೆ ಐತಿಹಾಸಿಕ ಜಯವಾಗಿದೆ.

ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ದೆಹಲಿಯ ತಮ್ಮ ನಿವಾಸದಲ್ಲಿ ಸಿಹಿ ಹಂಚಿ ಸಂಭ್ರಮಪಟ್ಟರು. ನಂತರ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿ, ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪನ್ನು ನಾನು ಹೃದಯಪೂರ್ವಕ ವಾಗಿ ಸ್ವಾಗತಿಸುತ್ತೇನೆ. ರಾಮಜನ್ಮಭೂಮಿ ಹೋರಾಟದಲ್ಲಿ ನಾನು ವೈಯಕ್ತಿಕವಾಗಿ ಮತ್ತು ಬಿಜೆಪಿ ಇಟ್ಟಿರುವ ನಂಬಿಕೆ ಮತ್ತು ಬದ್ಧತೆಗೆ ಸಂದ ಜಯವಾಗಿದೆ’ ಎಂದರು.

ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ, ‘ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು. ಅಯೋಧ್ಯೆ ಯಲ್ಲಿ 1992ರ ಡಿಸೆಂಬರ್ 6ರಂದು ನಡೆದ ಘಟನೆಗೆ ಯಾವುದೇ ಪಿತೂರಿ ನಡೆಸಿರಲಿಲ್ಲ ಎಂಬುದನ್ನು ಈ ತೀರ್ಪು ಸಾಬೀತುಪಡಿ ಸಿದೆ. ನಮ್ಮ ಕಾರ್ಯಕ್ರಮ, ರ್ಯಾಲಿ ಯಾವುದೇ ಪಿತೂರಿಯ ಭಾಗವಾಗಿರಲಿಲ್ಲ. ಇಂದು ನ್ಯಾಯಾಲಯದ ತೀರ್ಪು ನಮಗೆ ಖುಷಿ ಕೊಟ್ಟಿದೆ. ರಾಮ ಮಂದಿರ ನಿರ್ಮಾಣದತ್ತ ನಮ್ಮ ಸಂಪೂರ್ಣ ಗಮನವನ್ನು ಇನ್ನು ಹರಿಸೋಣ’ ಎಂದು ಹೇಳಿದ್ದಾರೆ.

Translate »