ಮತ್ತೆ ಲಾಕ್‍ಡೌನ್ ಆದರೆ ಮೈಸೂರಿನ ಶೇ.50ರಷ್ಟು ಕೈಗಾರಿಕೆಗಳಿಗೆ ಬೀಗ!
ಮೈಸೂರು

ಮತ್ತೆ ಲಾಕ್‍ಡೌನ್ ಆದರೆ ಮೈಸೂರಿನ ಶೇ.50ರಷ್ಟು ಕೈಗಾರಿಕೆಗಳಿಗೆ ಬೀಗ!

January 14, 2022

ಮೈಸೂರು, ಜ.13(ಜಿಎ)- ಕೊರೊನಾ ಒಂದು ಮತ್ತು ಎರಡನೇ ಅಲೆಯ ವೇಳೆ ವಿಧಿಸಿದ ಲಾಕ್ ಡೌನ್‍ನಿಂದ ಶೇ.30ರಿಂದ 35ರಷ್ಟು ಕೈಗಾರಿಕೆಗಳಿಗೆ ಬೀಗ ಬಿದ್ದಿದೆ. ಈ ಬಾರಿ ಮತ್ತೆ ಲಾಕ್‍ಡೌನ್ ಆದರೆ ಶೇ. 50ರಷ್ಟು ಕೈಗಾರಿಕೆಗಳು ಸ್ಥಗಿತವಾಗಲಿವೆ ಎಂದು ಕೆಲವು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದ ಅನೇಕರ ಜೀವನ ದುಸ್ತರವಾಗಿದೆ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಮತ್ತು ಕೈಗಾರಿಕೋದ್ಯಮಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಮತ್ತೆ ಲಾಕ್‍ಡೌನ್ ಆದರೆ ಮೈಸೂರಿನ ಶೇ.50ರಷ್ಟು ಕೈಗಾರಿಕೋದ್ಯಮಿಗಳು ಸಂಪೂರ್ಣ ಕೈಗಾರಿಕೆಗಳನ್ನು ತೊರೆದು ಬೇರೆ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮಿಗಳ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕಳೆದ ಎರಡು ಅಲೆಗಳಲ್ಲೂ ಕೈಗಾರಿಕೆಗಳಿಗೆ ಯಾವುದೇ ರೀತಿ ಸಹ ಕಾರ ನೀಡಿಲ್ಲ. ಬರೀ ಸುಳ್ಳು ಭರವಸೆಗಳನ್ನು ನೀಡಿದೆ. ಕಳೆದ ಲಾಕ್‍ಡೌನ್ ವೇಳೆ ಸರ್ಕಾರ 2 ತಿಂಗಳ ವಿದ್ಯುತ್ ಬಿಲ್‍ನಲ್ಲಿ ರಿಯಾಯಿತಿ ನೀಡುವುದಾಗಿ ಹೇಳಿತ್ತು. ಆದರೆ ಮೊದಲ ಅಲೆಯಲ್ಲಿ ಶೇ.30ರಷ್ಟು ಕೈಗಾರಿಕೆ ಗಳಿಗೆ ಅದು ತಲುಪಲಿಲ್ಲ. 2ನೇ ಅಲೆಯಲ್ಲಿ ಶೇ.10ರಷ್ಟು ತಲುಪಿಲ್ಲ. ಸರ್ಕಾರ ಘೋಷಣೆ ಮಾಡಿದ ಯಾವುದೇ ಯೋಜನೆಗಳು ಕೈಗಾರಿಕೆಗಳಿಗೆ ಬಂದಿಲ್ಲ ಎಂದರು.

ಕೊರೊನಾ ಸೋಂಕಿನಿಂದ ಅನೇಕ ಕಾರ್ಮಿಕರು ಮತ್ತು ಉದ್ಯಮಿಗಳು ಸಹ ಮೃತಪಟ್ಟಿದ್ದಾರೆ. ಅವರಿಗೆ ಸರ್ಕಾರದ ಪರಿಹಾರ ತಲುಪಿಲ್ಲ. ಏಕೆಂದರೆ ಸರ್ಕಾ ರದ ಬಳಿ ಕಾರ್ಮಿಕರ ಬಗ್ಗೆ ಸೂಕ್ತವಾದ ಅಂಕಿ ಅಂಶಗಳು ಇಲ್ಲ. ಸರ್ಕಾರ ಈ ಪರಿಹಾರದ ಹಣ ಪಡೆಯಲು ಬಿಪಿಎಲ್ ಕಾರ್ಡ್ ಇರಬೇಕು ಎಂಬ ಷರತ್ತು ವಿಧಿಸಿರುವುದರಿಂದ ಅನೇಕ ಕಾರ್ಮಿಕರು ಈ ಹಣ ಪಡೆಯಲು ಪರದಾಡುತ್ತಿದ್ದಾರೆ. ಅನೇಕ ಕಾರ್ಮಿ ಕರ ಬಳಿ ಬಿಪಿಎಲ್ ಕಾರ್ಡ್ ಇಲ್ಲದ ಕಾರಣ ಈಗ ಬಿಪಿಎಲ್ ಕಾರ್ಡ್ ಪಡೆಯಲು ಮುಂದಾಗಿದ್ದಾರೆ ಎಂದರು.

ಪರಿಣಾಮಕಾರಿ ಸಹಾಯ ಕೇಂದ್ರ: ಸಂಯುಕ್ತ ರಾಷ್ಟ್ರ ಗಳ ಅಭಿವೃದ್ಧಿ ಸಂಸ್ಥೆಯ ಆದೇಶದಂತೆ ಕಳೆದ ಬಾರಿ ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮಿಗಳ ಸಹಾಯ ಕೇಂದ್ರ ವನ್ನು ಸ್ವತಃ ಸರ್ಕಾರವೇ ಸ್ಥಾಪಿಸಿತ್ತು. ಅದರ ಮೂಲಕ ಕೈಗಾರಿಕೋದ್ಯಮಿಗಳ ಸಮಸ್ಯೆ ಸಂಬಂಧ ಮನವಿ ನೀಡಿದ್ದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ. ಕಾರ್ಮಿಕರಿಗೆ ಉಚಿತವಾಗಿ ಆಹಾರ ನೀಡುತ್ತೇವೆ ಎಂದರು ಅದು ಸಹ ಸಮರ್ಪಕವಾಗಿ ತಲುಪಿಲ್ಲ ಎಂದರು.

ಶೇ.7ರಷ್ಟು ಮಾತ್ರ ಬ್ಯಾಂಕ್ ಸಾಲ: ಮೈಸೂರಿನಲ್ಲಿ ಒಟ್ಟು 26 ಸಾವಿರ ಸಣ್ಣ, ಮಧ್ಯಮ ಹಾಗೂ ಬಾರೀ ಕೈಗಾರಿಕೆಗಳಿದ್ದು, ಅದರಲ್ಲಿ ಶೇ.7ರಷ್ಟು ಕೈಗಾರಿಕೋ ದ್ಯಮಿಗಳು ಮಾತ್ರ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ. ಶೇ.93ರಷ್ಟು ಕೈಗಾರಿಕೋದ್ಯಮಿಗಳು ಫೈನಾನ್ಸ್, ಚೀಟಿ ಹಾಗೂ ಕೈ ಸಾಲ ಪಡೆಯುವು ದರ ಮುಖಾಂತರ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಸುಮಾರು 10ರಿಂದ 15 ಸಾವಿರ ಸ್ವಯಂ ಉದ್ಯೋಗಿಗಳಿದ್ದಾರೆ. ಅವುಗಳಿಗೆ ಅವರೇ ಮಾಲೀಕರು ಹಾಗೂ ಕೆಲಸಗಾರರಾಗಿರುತ್ತಾರೆ. ಸರ್ಕಾರ ಯಾವುದೇ ಕೈಗಾರಿಕೋದ್ಯಮಿಗಳಿಗೆ ಸಹ ಕಾರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೇಡಿಕೆಗಳು: ಪಾಲಿಕೆಯಿಂದ ಸಂದಾಯ ಮಾಡುವ ಕಂದಾಯಕ್ಕೆ 1 ವರ್ಷ ವಿನಾಯಿತಿ ನೀಡಬೇಕು. s ಸರ್ಕಾರ ಎಷ್ಟು ಅವಧಿಗಳ ಕಾಲ ಲಾಕ್‍ಡೌನ್ ಮಾಡುತ್ತದೆ ಅಷ್ಟು ಅವಧಿಗೆ ಶೇ.50ರಷ್ಟು ಸರ್ಕಾರದ ವತಿಯಿಂದ ಕಾರ್ಮಿಕ ರಿಗೆ ಸಂಬಳ ಕೊಡಬೇಕು. ಕನಿಷ್ಠ ವಿದ್ಯುತ್ ದರವನ್ನು 6 ತಿಂಗಳವರೆಗೂ ಮುಂದೂಡಬೇಕು ಹಾಗೂ ಬ್ಯಾಂಕ್‍ನ ಕನಿಷ್ಠ ಬಡ್ಡಿ ದರದಲ್ಲೂ ಸಹ 6 ತಿಂಗಳವರೆಗೂ ಮುಂದೂಡಿ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗ ಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

Translate »