ಏ.9ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬಂಡೀಪುರದಲ್ಲಿ ಎಡಿಜಿಪಿ ಅಲೋಕ್‍ಕುಮಾರ್ ಪರಿಶೀಲನೆ
ಮೈಸೂರು

ಏ.9ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬಂಡೀಪುರದಲ್ಲಿ ಎಡಿಜಿಪಿ ಅಲೋಕ್‍ಕುಮಾರ್ ಪರಿಶೀಲನೆ

April 5, 2023

ಮೈಸೂರು, ಏ.4(ಆರ್‍ಕೆ)- ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 9ರಂದು ಚಾಮರಾಜನಗರ ಜಿಲ್ಲೆ, ಗುಂಡ್ಲು ಪೇಟೆ ತಾಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವರು.

ಪ್ರಧಾನಿಗಳ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ಇಂದು ಬಂಡೀಪುರಕ್ಕೆ ಭೇಟಿ ನೀಡಿ, ಮೇಲುಕಮನ ಹಳ್ಳಿ ಸಮೀಪ ಹೆಲಿಪ್ಯಾಡ್ ನಿರ್ಮಿಸಲು ದ್ದೇಶಿಸಿರುವ ಸ್ಥಳವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ಪ್ರಧಾನ ಮಂತ್ರಿಗಳು ಆಗಮಿಸುವ ಹೆಲಿಕಾಪ್ಟರ್ ಸುರಕ್ಷಿತವಾಗಿ ಭೂಸ್ಪರ್ಶವಾಗಲು ವ್ಯವಸ್ಥಿತ ಹೆಲಿಪ್ಯಾಡ್‍ಗೆ ಕ್ರಮ ವಹಿಸಬೇಕೆಂದು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ರಮೇಶ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಎಸ್ಪಿ ಪದ್ಮಿನಿ ಸಾಹೋ, ಡಿವೈಎಸ್ಪಿ ಪ್ರಿಯ ದರ್ಶಿನಿ ಸಾಣೆಕೊಪ್ಪ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ವೇಳೆ ಉಪಸ್ಥಿತರಿದ್ದರು. ನಂತರ ಅಲೋಕ್ ಕುಮಾರ್ ಬಂಡೀಪುರದ ಜಂಗಲ್ ಲಾಡ್ಜಸ್ ಅಂಡ್ ರೆಸಾಟ್ರ್ಸ್‍ನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಧಾನಿ ಗಳು ಆಗಮಿಸುತ್ತಿರುವುದರಿಂದ ಏಪ್ರಿಲ್ 9ರಂದು ಬೆಳಗ್ಗೆ ಹುಲಿ ಸಂರಕ್ಷಿತ ಪ್ರದೇಶ (ಬಂಡೀಪುರ ಟೈಗರ್ ರಿಸರ್ವ್) ವ್ಯಾಪ್ತಿ ಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಿ ವ್ಯಾಪಕ ಭದ್ರತೆ ಮಾಡಿ ಕಟ್ಟೆಚ್ಚರ ವಹಿಸುವಂತೆ ಸಲಹೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸಫಾರಿ ಹೋಗುವುದರಿಂದ ಸಫಾರಿ ಕೇಂದ್ರ, ವಾಹನ ಸಾಗುವ ಮಾರ್ಗ ವನ್ನು ಸುಸಜ್ಜಿತವಾಗಿರಿಸಬೇಕು. ಸಫಾರಿ ಮಾರ್ಗದ ಗುಂಡಿಗಳನ್ನು ಮುಚ್ಚಿ ಎರಡೂ ಬದಿ ಬೆಳೆದಿರುವ ಗಿಡಗಂಟಿಗಳನ್ನು ತೆರವು ಗೊಳಿಸಿ ಸಂಚಾರಕ್ಕೆ ಅಣಿಗೊಳಿಸುವಂತೆಯೂ ಅಲೋಕ್‍ಕುಮಾರ್ ಇದೇ ಸಂದರ್ಭ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿ ದರು. ಮೋದಿ ಅವರು ವಿಶ್ರಾಂತಿ ಪಡೆ ಯಲು ಜಂಗಲ್ ರೆಸಾರ್ಟ್‍ನಲ್ಲಿ ಕೊಠಡಿ ಗಳ ಕಾಯ್ದಿರಿಸಿ, ಅವುಗಳ ಶುಚಿತ್ವ ಕಾಪಾಡಿ ಕೊಳ್ಳುವುದು. ಭದ್ರತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಯಾವುದೇ ಸಣ್ಣಪುಟ್ಟ ಲೋಪವಾಗ ದಂತೆ ಎಚ್ಚರ ವಹಿಸುವ ಜೊತೆಗೆ ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಎಸ್‍ಪಿಜಿ ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಅವರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಧಾನಿ ಮೋದಿ ಪ್ರವಾಸ ಕಾರ್ಯಕ್ರಮದ ಪ್ರಕಾರ ಅವರು ಏಪ್ರಿಲ್ 8ರಂದು ರಾತ್ರಿ 8.40ಕ್ಕೆ ಚೆನ್ನೈ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಸ್ತೆ ಮೂಲಕ ಕಾರಿನಲ್ಲಿ ಹೋಟೆಲ್ ರ್ಯಾಡಿಸನ್ ಬ್ಲೂ ಪ್ಲಾಜಾಗೆ ಬಂದು ಅಂದು ರಾತ್ರಿ ವಾಸ್ತವ್ಯ ಹೂಡುವರು. ಏಪ್ರಿಲ್ 9ರಂದು ಬೆಳಗ್ಗೆ 6.30ಕ್ಕೆ ಭಾರತೀಯ ವಾಯುದಳ (ಐಎಎಫ್)ದ ಹೆಲಿಕಾಪ್ಟರ್‍ನಲ್ಲಿ ಬೆಳಗ್ಗೆ 7 ಗಂಟೆಗೆ ಚಾಮರಾಜನಗರ ಜಿಲ್ಲೆ ಮೇಲು ಕಮ್ಮನಹಳ್ಳಿ ಹೆಲಿಪ್ಯಾಡ್ ತಲುಪಿ, ಅಲ್ಲಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳುವರು. ನಂತರ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿ, ಅಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದ ಸಾಕ್ಷ್ಯ ಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ದಲ್ಲಿರುವ ಆನೆ ಮರಿ ಸಲಹಿದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನಿಸುವರು.

ಅಲ್ಲಿಂದ 9.45ಕ್ಕೆ ಹೆಲಿಕಾಪ್ಟರ್‍ನಲ್ಲಿ ಹೊರಟು ಬೆಳಗ್ಗೆ 10.30 ಗಂಟೆಗೆ ಮೈಸೂರಿನ ಕೆಎಸ್‍ಓಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಲಿರುವ ನರೇಂದ್ರ ಮೋದಿ, ಮಧ್ಯಾಹ್ನ 12.40 ಗಂಟೆಗೆ ಮೈಸೂರಿನಿಂದ ನವದೆಹಲಿಗೆ ಹಿಂದಿರುಗುವರು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಮಾರ್ಚ್ 29ರಂದು ಎಸ್‍ಪಿಜಿ ಅಧಿಕಾರಿಗಳು ಬಂಡೀಪುರಕ್ಕೆ ಭೇಟಿ ನೀಡಿದ್ದ ವೇಳೆ ನೀಡಿದ ಸೂಚನೆಯಂತೆ ಸಫಾರಿ ಮಾರ್ಗದ ಗುಂಡಿಗಳನ್ನು ಮುಚ್ಚಿ ಪ್ರಧಾನಿಗಳ ಸಫಾರಿಗೆ ಅನುವು ಮಾಡಿಕೊಡಲಾಗುವುದು ಎಂದು ಬಂಡೀಪುರ ಟೈಗರ್ ರಿಸರ್ವ್ ನಿರ್ದೇಶಕ ಡಾ. ಪಿ. ರಮೇಶ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »