ನಂಜನಗೂಡಲ್ಲಿ ವಿಜೃಂಭಣೆಯ ಪಂಚ ಮಹಾರಥೋತ್ಸವ
ಮೈಸೂರು

ನಂಜನಗೂಡಲ್ಲಿ ವಿಜೃಂಭಣೆಯ ಪಂಚ ಮಹಾರಥೋತ್ಸವ

April 4, 2023

ನಂಜನಗೂಡು, ಏ.2- ದಕ್ಷಿಣಕಾಶಿ, ಗರಳಾಪುರಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿ ರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ (ದೊಡ್ಡಜಾತ್ರೆ) ಗೌತಮ ಪಂಚ ಮಹಾ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಉದ್ಘೋಷ, ಜಯಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ದೊಡ್ಡಜಾತ್ರೆ ಅಂಗವಾಗಿ ಭಾನುವಾರ ಮುಂಜಾನೆ 2 ಗಂಟೆಯಿಂದಲೇ ದೇವಾ ಲಯದಲ್ಲಿ ಕ್ಷೀರಾಭಿಷೇಕ, ಫಲಪಂಚಾ ಮೃತಾಭಿಷೇಕ, ಮಹೋನ್ನತಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆ ನೆರವೇರಿಸಿ ನಂತರ ಹೋಮ ಹವ ನಾದಿಗಳನ್ನು ನೆರವೇರಿಸಲಾಯಿತು. ನಂತರ ರಥದ ಬಳಿ ಬಲಿ ಪೂಜೆ ನೆರವೇರಿಸಿದ ನಂತರ ಉತ್ಸವಮೂರ್ತಿಯನ್ನು ವಿಶೇಷ ಹೂ, ವಜ್ರ, ವೈಢೂರ್ಯಗಳಿಂದ ಅಲಂ ಕರಿಸಲಾಯಿತು. ಬಳಿಕ ಉದಯಾತ್ಪೂರ್ವ 6ರಿಂದ 6.40ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ದೇವಾಲಯದ ಆಗಮಿಕ ಅರ್ಚಕ ಹಾಗೂ ದೇವಾಲಯದ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ಮತ್ತು ದೇಗುಲದ ಅರ್ಚಕ ವೃಂದವರು ಧಾರ್ಮಿಕ ವಿಧಿ ವಿಧಾನ ಗಳನ್ನು ಪೂರೈಸಿದ ನಂತರ ಶ್ರೀಕಂಠೇಶ್ವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿ ಷ್ಠಾಪನೆ ಮಾಡಲಾಯಿತು.

ಬೆಳಗ್ಗೆ 6.40ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ ಮೂಲೆಗಳಿಂದ ಶನಿವಾರದಿಂದಲೇ ಆಗಮಿಸಿದ ಲಕ್ಷಾಂತರ ಭಕ್ತರು ತೇರಿನ ಹಗ್ಗ ಹಿಡಿದು ಎಳೆಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ಬೆಳಗ್ಗೆ 8.30ಕ್ಕೆ ಗೌಥಮ ರಥವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸ್ವಸ್ಥಾನ ಸೇರಿತು.

ಈ ಮೊದಲು ಗಣಪತಿ ರಥ, ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡರಥ (ಗೌತಮ ರಥ), ನಂತರ ಚಂಡಿಕೇಶ್ವರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ಮತ್ತು ಕೊನೆಯಲ್ಲಿ ಶ್ರೀಪಾರ್ವತಮ್ಮನವರ ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಬೆಳಗ್ಗೆ 10.40ರ ವೇಳೆಗೆ ರಥಬೀದಿಯಲ್ಲಿ 1.5 ಕಿಮೀ ಚಲಿಸಿ ಸ್ವಸ್ಥಾನ ತಲುಪಿದವು. 5 ರಥಗಳು ರಥದ ಬೀದಿಗಳಲ್ಲಿ ಚಲಿಸುವಾಗ ರಸ್ತೆ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಹರಕೆ ತೀರಿಸಿದರು. ನವ ವಧು-ವರರು ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೊಂಡರು.

ವಿವಿಧ ಸಂಘ ಸಂಸ್ಥೆಗಳಿಂದ ಪ್ರಸಾದ ವಿತರಣೆ: ವಿವಿಧ ಸಂಘ ಸಂಸ್ಥೆಗಳು ಶ್ರೀಕಂಠೇಶ್ವರಸ್ವಾಮಿ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ, ರೈಸ್‍ಬಾತ್, ಮೊಸರನ್ನ, ಪುಳಿಯೋಗರೆ, ಲಾಡು, ಕುಡಿಯುವ ನೀರಿನ ಬಾಟಲ್‍ಗಳನ್ನು ವಿತರಿಸಿದರು. ದೇವಾಲಯದ ವತಿಯಿಂದಲೂ ದಾಸೋಹ ಭವನದಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಹೂವಿನ ಅಲಂಕಾರ: ಶ್ರೀಕಂಠೇಶ್ವರಸ್ವಾಮಿಯವರ ಗೌತಮ ಪಂಚ ಮಹಾರಥೋತ್ಸವದ ಪ್ರಯುಕ್ತ ಐದೂ ರಥಗಳಿಗೂ ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ಬಟ್ಟೆ, ದೊಡ್ಡ ಗಾತ್ರದ ಬಾವುಟಗಳನ್ನು ಕಟ್ಟಲಾಗಿತ್ತು. ಅಲ್ಲದೆ ನಗರದ ವಿವಿಧ ಕಟ್ಟಡಗಳಿಗೆ, ಪ್ರಮುಖ ಬೀದಿಗಳಿಗೆ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಸುರಕ್ಷತೆ ದೃಷ್ಟಿಯಿಂದ ರಥ ಬೀದಿಯ 9 ಕಡೆಗಳಲ್ಲಿ ವಾಚ್‍ಟವರ್ ಮತ್ತು 60ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅವಳವಡಿಸಲಾಗಿತ್ತು. 5 ಕಡೆಗಳಲ್ಲಿ ಆರೋಗ್ಯ ಕೇಂದ್ರ ಮತ್ತು ಸಹಾಯವಾಣಿ ತೆರೆಯಲಾಗಿತ್ತು. 500ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಾತ್ರೋತ್ಸವದ ಅಂಗವಾಗಿ ಮಾ.26ರಿಂದಲೇ ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾಗಿ ದೇವತಾ ಕಾರ್ಯಗಳು ಮುಂದುವರಿದು ಇಂದು ಗೌತಮ ಪಂಚ ರಥೋತ್ಸವ ನೆರವೇರಿತು. ಏ.4ರಂದು ರಾತ್ರಿ 7ಕ್ಕೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದೆ. ಏ.6ರಂದು ಮಹಾಸಂಪ್ರೋಕ್ಷಣೆ ಪೂರ್ವಕ ನಂದಿ ವಾಹನೋತ್ಸವ, ಶಯನೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.

ಈ ವೇಳೆ ದೇವಾಲಯದ ಇಓ ಜಗದೀಶ್, ತಹಸೀಲ್ದಾರ್ ಶಿವಕುಮಾರ್, ದೇವಾಲಯದ ಎಇಓ ವೆಂಕಟೇಶ ಪ್ರಸಾದ್, ಶಾಸಕ ಬಿ.ಹರ್ಷವರ್ಧನ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವ ಸೇರಿದಂತೆ ಇತರರಿದ್ದರು.

Translate »