ಗೆಳೆಯನ ಮನೆಯಲ್ಲಿ ಬಾಡೂಟ, ಹಾಸ್ಯ ಚಟಾಕಿ ಹನುಮ ಜಯಂತಿ ದಿನಾಂಕ ಗೊತ್ತಾ… ಗೊತ್ತಿಲ್ಲದಿದ್ದರೆ ಸುಮ್ಮನೆ ತಿನ್ನು…
ಮೈಸೂರು

ಗೆಳೆಯನ ಮನೆಯಲ್ಲಿ ಬಾಡೂಟ, ಹಾಸ್ಯ ಚಟಾಕಿ ಹನುಮ ಜಯಂತಿ ದಿನಾಂಕ ಗೊತ್ತಾ… ಗೊತ್ತಿಲ್ಲದಿದ್ದರೆ ಸುಮ್ಮನೆ ತಿನ್ನು…

December 28, 2020

ಮೈಸೂರು, ಡಿ.27(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸ್ವಗ್ರಾಮ ಸಿದ್ದರಾಮನಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಸಿದ್ದರಾಮಯ್ಯನವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅವರನ್ನು ಕಾಣಲು ಗ್ರಾಮಸ್ಥರು ಮುಗಿ ಬಿದ್ದರು. ಅವರು ಮತದಾನ ಮಾಡಿ ಬರುವವರೆಗೆ ಮತಗಟ್ಟೆಯ ಹೊರಗೆ ಕಾದಿದ್ದ ಜನರು, ಅವರು ಮತ ಚಲಾಯಿಸಿ ಮತಗಟ್ಟೆ ಯಿಂದ ದೂರ ಬರುತ್ತಿದ್ದಂತೆ ಅವರನ್ನು ಕಂಡು ಪ್ರೀತಿಯಿಂದ ಮಾತನಾಡಿಸಲು ಮುಂದಾದರು, ಸಂಭ್ರಮಿಸಿದರು.

ಮತದಾನದ ಬಳಿಕ ಸಿದ್ದರಾಮಯ್ಯ ರಾಜಕೀಯ ಬಿಟ್ಟು ಸಿದ್ದ ರಾಮನಹುಂಡಿಯಲ್ಲಿ ಕೆಲ ಸಮಯ ಗೆಳೆಯರು, ಬೆಂಬಲಿಗ ರೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಬಾಲ್ಯದ ಗೆಳೆಯ ಕೆಂಪೀರೇಗೌಡರ ಮನೆಯಲ್ಲಿ ಮುದ್ದೆ, ನಾಟಿಕೋಳಿ, ಚಿಕನ್ ಚಾಪ್ಸ್ ಸವಿದರು. ಊಟ ಮಾಡುತ್ತಿದ್ದ ವೇಳೆ ಬೆಂಬಲಿಗನೊಬ್ಬ ಸರ್… ಇವತ್ತು ಹನುಮ ಜಯಂತಿ ಎಂದ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹನುಮ ಜಯಂತಿ ದಿನಾಂಕ ಗೊತ್ತಾ? ಗೊತ್ತಿಲ್ಲ ಎಂದರೆ ಸುಮ್ಮನೆ ತಿನ್ನು, ಏನೂ ಆಗಲ್ಲ, ಎಂದು ಹಾಸ್ಯ ಚಟಾಕಿ ಹಾರಿಸಿದರು.

ಊಟದ ಸಮಯದಲ್ಲಿ ಮನೆ ಹೊರಗೆ ಗ್ರಾಮದ ಮಹಿಳೆ ಯರು ಸೋಬಾನೆ ಪದ ಹಾಡಿ ಶುಭ ಕೋರಿದರು. ಸೋಬಾನೆ ಪದ ಹಾಡಿದ ಮಹಿಳೆಯರಿಗೆ ಹಣ ನೀಡುವ ಮೂಲಕ ಸಿದ್ದರಾಮಯ್ಯ ವಿಶ್ವಾಸ ತೋರಿದರು. ಮೊದಲು ನಾನು ಮೂರು ಹೊತ್ತೂ ನಾನ್‍ವೆಜ್ ತಿನ್ನುತ್ತಿದ್ದೆ. ಈಗ ಆಂಜಿಯೋಗ್ರಾಮ್ ಆದ ಮೇಲೆ ಕಡಿಮೆ ಮಾಡಿದ್ದೇನೆ. ಭಾನುವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ನಾನ್‍ವೆಜ್ ತಿನ್ನುತ್ತೇನೆ. ಅದೇ ರೀತಿ ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದೆ. ಸ್ನೇಹಿತ ಮಹೇಶ್ ಫಾರಿನ್‍ನಿಂದ ಎರಡು ಬಂಡಲ್ ಸಿಗರೇಟು ತಂದು ಕೊಟ್ಟಿದ್ದ. ಕೂತ್ಕೊಂಡು ಎಲ್ಲಾ ಸಿಗರೇಟು ಸೇದು ಬಿಟ್ಟೆ. ಒಂದು ದಿನ ಟ್ರಿಪ್ ಹೋದಾಗ ಕೂತ್ಕೊಂಡು ಯೋಚನೆ ಮಾಡಿದೆ. ನಾನು ಇಷ್ಟೊಂದು ಸಿಗರೇಟು ಸೇದಿದರೆ ಏನಾಗಬೇಡ ಎಂದು ಯೋಚಿಸಿದೆ. ಬಳಿಕ ಒಂದು ವಾರ ಟ್ರಿಪ್‍ಗೆ ಹೋಗಿ ಬರುವಷ್ಟರಲ್ಲಿ ಸಂಪೂರ್ಣ ಸಿಗರೇಟ್ ಬಿಟ್ಟು ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕುರುಬರ ಎಸ್‍ಟಿ ಮೀಸಲಾತಿ ಹೋರಾಟ ಕುರುಬರನ್ನು ಇಬ್ಭಾಗ ಮಾಡುವ ಹುನ್ನಾರ: ಸಿದ್ದರಾಮಯ್ಯ ಟೀಕೆ

ಮೈಸೂರು, ಡಿ.27(ಆರ್‍ಕೆಬಿ)- ಮೈಸೂರಿನಲ್ಲಿ ಡಿ.29ರಂದು ಕುರುಬರ ಎಸ್‍ಟಿ ಮೀಸಲಾತಿ ಹೋರಾಟ ನಿಗದಿಪಡಿಸಿರುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಅವರದ್ದೇ ಸರ್ಕಾರ ಇರಬೇಕಾದರೆ ಅವರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಮತ್ತು ಎ.ಹೆಚ್. ವಿಶ್ವನಾಥ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸಿದ್ದರಾಮನಹುಂಡಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೋರಾಟದ ಅಗತ್ಯವೇ ಇಲ್ಲ. ಇದು ಕುರುಬರನ್ನು ಇಬ್ಭಾಗ ಮಾಡುವ ಹುನ್ನಾರ ಎಂದು ಕಿಡಿಕಾರಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ್ ಇಬ್ಬರೂ ಬಿಜೆಪಿ ಸರ್ಕಾರದಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಅವರು ಕುಲಶಾಸ್ತ್ರ ಅಧ್ಯಯನದ ವರದಿ ಪಡೆದು ಕೇಂದ್ರಕ್ಕೆ ಏಕೆ ಶಿಫಾರಸು ಮಾಡುತ್ತಿಲ್ಲ. ಇದು ಕುರುಬರನ್ನು ಇಬ್ಬಾಗ ಮಾಡುವ ಆರ್‍ಎಸ್‍ಎಸ್ ಹುನ್ನಾರವಾಗಿದೆ. ಹಾಗಾಗಿ ಇದಕ್ಕೆ ಹೋರಾಟದ ಅಗತ್ಯವಿಲ್ಲ. ಅವರು ಹೋರಾಟ ಯಾರ ವಿರುದ್ಧ ಮಾಡುತ್ತಾರೆ. ಅವರದ್ದೇ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾರೆಯೇ? ಅದಕ್ಕೆ ಚಳವಳಿ, ಹೋರಾಟ ಏಕೆ? ಪಾದಯಾತ್ರೆ ಏಕೆ? ಎಂದು ಪ್ರಶ್ನಿಸಿದರು.

 

Translate »