ಹನೂರು, ಸೆ.27(ಸೋಮು)- ರೈತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ದೇಶದ್ಯಾಂತ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಪಟ್ಟಣದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ಸಂಯುಕ್ತ ಕಿಸಾನ್ ಮೋರ್ಚಾ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಎಸ್‍ಡಿಪಿಐ, ಜೆಡಿಯು ಇನ್ನಿತರೆ ಪ್ರಗತಿಪರ ಸಂಘಟನೆಯವರು ಪಟ್ಟಣದಲ್ಲಿ ಜಮಾಯಿಸಿ ವರ್ತಕರು ಮತ್ತು ಸಾರ್ವಜನಿಕರ ಸಹಕಾರದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಭಾರತ್ ಬಂದ್‍ಗೆ ಬೆಂಬಲ ಸೂಚಿಸಿದರು.
ರೈತ ಸಂಘಟನೆ ಮತ್ತು ವಿವಿಧ ಪ್ರಗತಿಪರ ಸಂಘಟನೆಯ ನೂರಾರು ಜನತೆ ಪಟ್ಟಣದ ಟಿಎಪಿಎಂಸಿ ಪೆಟ್ರೋಲ್ ಬಂಕ್ ಹತ್ತಿರ ಒಗ್ಗೂಡಿ ದಿ.ಹೆಚ್.ನಾಗಪ್ಪ ವೃತ್ತದ ಮೂಲಕ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರವಿನಾಯ್ಡು, ದಸಂಸ ಮೈಸೂರು ವಿಭಾಗಿಯ ಪ್ರಧಾನ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಜೆಡಿಯು ಅಧ್ಯಕ್ಷ ಗಂಗಾಧರ್ ಮಾತನಾಡಿದರು.
ಎಸ್‍ಡಿಪಿಐ ಸಂಘಟನೆಯ ಹನೂರು ತಾಲೂಕು ಅಧ್ಯಕ್ಷ ನೂರುಲ್ಲಾ, ರೈತ ಮುಖಂಡ ದಂಟಳ್ಳಿ ಲಕ್ಷ್ಮಣ, ಅಜ್ಜೀಪುರ ಶಿವಣ್ಣ, ಕುಮಾರ, ಅಮಜಾದ್ ಖಾನ್, ಬಸವರಾಜು, ಮುರುಗೇಶ್, ದಸಂಸ ಸಂಘಟನೆಯ ಕೆ.ವೀರ, ಜಾನಿ ಸೇರಿದಂತೆ ನೂರಾರು ರೈತರು, ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.