ಬೆಂಗಳೂರು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಸಂಘಟನೆಗಳ ನಿಷೇಧಕ್ಕೆ ಬಿಜೆಪಿ ಮನವಿ
ಮೈಸೂರು

ಬೆಂಗಳೂರು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಸಂಘಟನೆಗಳ ನಿಷೇಧಕ್ಕೆ ಬಿಜೆಪಿ ಮನವಿ

February 26, 2021

ಮೈಸೂರು, ಫೆ.25(ಆರ್‍ಕೆಬಿ)- ಬೆಂಗ ಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) 10.2.2021ರಂದು ನ್ಯಾಯಾಲಯಕ್ಕೆ 7 ಸಾವಿರ ಪುಟದ ಚಾರ್ಜ್‍ಶೀಟ್ ಸಲ್ಲಿಸಿದ್ದು, ಗಲಭೆಯಲ್ಲಿ ಇದುವರೆಗೆ 247 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ 40ಕ್ಕೂ ಅಧಿಕ ಗಲಭೆಕೋರರು ಎಸ್‍ಡಿ ಪಿಐ ಸಂಘಟನೆಯ ಸದಸ್ಯರಾಗಿದ್ದಾರೆ. ಒಂದೂವರೆ ತಿಂಗಳ ಕಾಲ ಗಲಭೆಗೆ ಪೂರ್ವ ಯೋಜನೆ ನಡೆಸಿದ್ದರೆಂದು ತಿಳಿದಿದೆ. ಹೀಗಾಗಿ ಪದೇ ಪದೆ ಗಲಭೆಗೆ ಕುಮ್ಮಕ್ಕು ನೀಡುವ ಮತ್ತು ವಿಧ್ವಂಸಕ ಕೃತ್ಯದಲ್ಲಿ ತೊಡ ಗುವ ಈ ಸಂಘಟನೆಗಳನ್ನು ನಿಷೇಧಿಸು ವಂತೆ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಸರ್ಕಾರಕ್ಕೆ ಮನವಿ ಮಾಡಿದರು.

ಬಿಜೆಪಿ ರಾಜ್ಯ ವಕ್ತಾರರಾಗಿ ನೇಮಕ ಗೊಂಡ ಬಳಿಕ ಮೈಸೂರಿನ ಬಿಜೆಪಿ ಕಚೇರಿ ಯಲ್ಲಿ ಗುರುವಾರ ಕರೆದಿದ್ದ ಮೊದಲ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ರದ್ದು ಮಾಡಿದ ಕ್ರಮಕ್ಕೆ ವಿರೋಧ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಜಾರಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ವಿರೋಧಿಸಿ, 2020ರ ಆ.11ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವನ್ನೇ ಆರೋಪಿಗಳು ಗಲಭೆಗೆ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ವಿವರಿಸಿದರು.

ದಲಿತ ಶಾಸಕನ ಮನೆ ಸುಡುವುದು, ಜನಸಾಮಾನ್ಯರು, ಬಡವರ ವಾಹನಗಳಿಗೆ ಬೆಂಕಿ ಇಟ್ಟು ಜನರಲ್ಲಿ ಆತಂಕ ಮತ್ತು ಭಯ ಸೃಷ್ಟಿಸುವ ಯೋಜನೆ ಇದರ ಹಿಂದಿತ್ತು. ಈ ವಿಚಾರಗಳನ್ನು ಬಿಜೆಪಿ ಶಾಸಕ ಮತ್ತು ಈಗ ಸಚಿವರಾಗಿರುವ ಅರವಿಂದ ಲಿಂಬಾವಳಿ ಅವರ ಸತ್ಯಶೋಧನಾ ಸಮಿತಿಯೂ ಹೊರ ಹಾಕಿತ್ತು. ಅಲ್ಲದೆ ಈ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು ಎಂದು ಉಲ್ಲೇಖಿಸಿದರು.

ಈ ಸಂಸ್ಥೆಗಳಿಗೆ ಕಾಂಗ್ರೆಸ್ ನಾಯಕರ ಕುಮ್ಮಕ್ಕಿದೆ. ಸಿದ್ದರಾಮಯ್ಯ 2015ರಲ್ಲಿ ಮುಖ್ಯ ಮಂತ್ರಿಯಾಗಿದ್ದಾಗ ಪಿಎಫ್‍ಐ ಮತ್ತು ಕೆಎಫ್‍ಡಿ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಇದ್ದ 1600ಕ್ಕೂ ಹೆಚ್ಚು ಪ್ರಕರಣ ಗಳನ್ನು ರದ್ದು ಮಾಡಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಹೀಗಾಗಿ ಈ ಸಂಘ ಟನೆಗಳನ್ನು ನಿಷೇಧಿಸಬೇಕು ಎಂದು ಸರ್ಕಾ ರಕ್ಕೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂ ತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮ ಶೇಖರ್, ಜಿಲ್ಲಾ ಮಾಧ್ಯಮ ಪ್ರಮುಖ್ ರಾಜ್‍ಕುಮಾರ್, ಸಹ ಸಂಚಾಲಕ ಕೇಬಲ್ ಮಹೇಶ್, ಪುನೀತ್ ಉಪಸ್ಥಿತರಿದ್ದರು.

Translate »